×
Ad

ಕುಟುಂಬ ಸುಧಾರಣೆಯಾದರೆ ಸಮುದಾಯ ಸುಧಾರಣೆಯಾದಂತೆ: ಎಸ್. ಬಿ. ದಾರಿಮಿ

Update: 2017-02-13 17:10 IST

ಉಪ್ಪಿನಂಗಡಿ, ಫೆ. 13: ಎಲ್ಲ ಕುಟುಂಬಗಳು ಒಗ್ಗಟ್ಟಾಗಿ ತಮ್ಮ ತಮ್ಮ ಹೊಣೆಗಾರಿಕೆಗಳನ್ನು ನಿಭಾಯಿಸಿದರೆ ಅದರಿಂದ ಇಡೀ ಸಮುದಾಯವೇ ಸುಧಾರಣೆಯಾಗುತ್ತದೆ ಎಂದು ಖ್ಯಾತ ಧಾರ್ಮಿಕ ವಿದ್ವಾಂಸ ಎಸ್. ಬಿ. ದಾರಿಮಿ ಉಪ್ಪಿಂಗಡಿ ಇವರು ಅಭಿಪ್ರಾಯ ಪಟ್ಟಿದ್ದಾರೆ.

ರವಿವಾರ ಉಪ್ಪಿನಂಗಡಿ ಅರಫಾ ವಿದ್ಯಾಕೇಂದ್ರದ ಸಭಾಂಗಣದಲ್ಲಿ ನಡೆದ ಮಠ ಬಂಡಸಾಲೆ ಅಬ್ದುಲ್ ರಹಿಮಾನ್(ಪೊಡಿಯಾಕ) ಫ್ಯಾಮಿಲಿ ಚಾರಿಟೇಬಲ್ ಟ್ರಸ್ಟ್(ರಿ) ಇದರ ಅಧಿಕೃತ ಉದ್ಘಾಟನಾ ಸಮಾರಂಭವನ್ನುದೆ್ದೀಶಿಸಿ ಅವರು ಮಾತನಾಡುತ್ತಿದ್ದರು.

 ಇಂದು ಕುಟುಂಬದ ಮುಖ್ಯಸ್ಥರು ತಮ್ಮ ಹೊಣೆಗಾರಿಕೆಗಳನ್ನು ಮರೆತಿದ್ದಾರೆ. ಕುಟುಂಬದ ಹೆಸರನ್ನು ಒಣಪ್ರತಿಷ್ಠೆಯನ್ನು ಪ್ರದರ್ಶಿಸಲು ಬಳಸಿಕೊಳ್ಳುತ್ತೇವೆ ಹೊರತು ಕುಟುಂಬದಲ್ಲಿರುವ ಬಡವರು ಮತ್ತು ನೊಂದವರ ಬಗ್ಗೆ ನಮ್ಮ ಹೊಣೆಗಾರಿಕೆಗಳನ್ನು ನಿಭಾಯಿಸುವಲ್ಲಿ ವಿಫಲರಾಗುತ್ತಿದ್ದೇವೆ. ಸಮುದಾಯದ ಏಳಿಗೆ ಕುಟುಂಬದ ಏಳಿಗೆಯಿಂದಲೇ ಆರಂಭವಾಗುತ್ತದೆ ಎನ್ನುವುದನ್ನು ನಾವು ಮರೆಯಬಾರದು ಎಂದು ಅವರು ಹೇಳಿದರು.

ಪರಲೋಕದ ಬಗ್ಗೆ ನಾವು ಮಾತನಾಡುತ್ತೇವೆ. ಆದರೆ ಇದೇ ಸಂದರ್ಭದಲ್ಲಿ ಇಹಲೋಕದ ನಮ್ಮ ಕೆಲಸಕಾರ್ಯಗಳೇ ನಮ್ಮನ್ನು ಪರಲೋಕದಲ್ಲಿ ರಕ್ಷಿಸುತ್ತದೆ ಎನ್ನುವುದನ್ನು ಮರೆತಿದ್ದೇವೆ. ಇಹಲೋಕವು ಪರಲೋಕದ ಕಡೆಗಿರುವ ಸೇತುವೆ. ಆದುದರಿಂದ ಈ ಸೇತುವೆ ದಾಟದೆ, ಬರೇ ಪರಲೋಕದ ಚಿಂತೆ ನಮ್ಮನ್ನು ಯಶಸ್ಸಿನ ಕಡೆಗೆ ಕೊಂಡೊಯ್ಯಲಾರದು. ಇಂದು ಮಠ ಬಂಡಸಾಲೆ ಅಬ್ದುಲ್‌ರಹಿಮಾನ್ ಕುಟುಂಬದ ಸದಸ್ಯರೆಲ್ಲ ಒಂದಾಗಿ ಟ್ರಸ್ಟ್ ಒಂದನ್ನು ರಚಿಸಿ ಕುಟುಂಬದ ಏಳಿಗೆಯ ಬಗ್ಗೆ ಚಿಂತಿಸಿರುವುದು ಸ್ವಾಗತಾರ್ಹ. ಇದು ಇತರ ಕುಟುಂಬಗಳಿಗೂ ಮಾದರಿಯಾಗಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಮಠಬಂಡಸಾಲೆ ಫ್ಯಾಮಿಲಿ ಚಾರಿಟೇಬಲ್ ಟ್ರಸ್ಟ್‌ನ್ನು ಅಧಿಕೃತವಾಗಿ ಉದ್ಘಾಟಿಸಿದ ಹಿರಿಯ ನ್ಯಾಯವಾದಿ, ಬ್ಯಾರಿ ಸಾಹಿತ್ಯ ಅಕಾಡೆಮಿಯ ಸ್ಥಾಪಕಾಧ್ಯಕ್ಷ, ಟ್ರಸ್ಟ್‌ನ ಗೌರವ ಸಲಹೆಗಾರ ಎಂ. ಬಿ. ಅಬ್ದುಲ್ ರಹಿಮಾನ್ ಮಾತನಾಡಿ, ನಾವಿಂದು ನಮ್ಮ ಮಕ್ಕಳಲ್ಲಿ ಕನಸುಗಳನ್ನು ಬಿತ್ತಿ, ಅದನ್ನು ಅರಳಿಸುವ ಕೆಲಸವನ್ನು ಮಾಡಬೇಕಾಗಿದೆ. ನಮ್ಮ ಕುಟುಂಬದ ಹಿರಿಯರು ನಮಗೆ ಒಪ್ಪಿಸಿರುವ ಮಾನವೀಯ ಧರ್ಮವನ್ನು ಮುಂದಿನ ತಲೆಮಾರಿಗೆ ತಲುಪಿಸುವುದು ನಮ್ಮ ಕರ್ತವ್ಯ ಎಂದರು. ಕುಟುಂಬದಲ್ಲಿರುವ ಬಡವರನ್ನು ಗುರುತಿಸಿ ಅವರಿಗೆ ನೆರವು ನೀಡುವುದು ಸೇರಿದಂತೆ, ಅರ್ಹ ಪ್ರತಿಭಾವಂತರಿಗೆ ಪ್ರೋತ್ಸಾಹ ನೀಡಿ ಅವರನ್ನು ಬೆಳೆಸುವುದು ಟ್ರಸ್ಟ್‌ನ ಉದ್ದೇಶವಾಗಬೇಕು ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಕುಟುಂಬದ ಹಿರಿಯರೂ, ಟ್ರಸ್ಟ್‌ನ ಗೌರವ ಸಲಹೆಗಾರರೂ ಆದ ಎಂ. ಇದಿನಬ್ಬ ಅವರು ಮಾತನಾಡಿ, ಈ ಟ್ರಸ್ಟ್ ಯಶಸ್ವಿಯಾಗಬೇಕಾದರೆ ಕುಟುಂಬದ ಎಲ್ಲ ಸದಸ್ಯರು ಪರಸ್ಪರ ನಂಬಿಕೆಯಿಂದ ಕೈಜೋಡಿಸಬೇಕು. ಹಾಗೆಯೇ ಯಾವುದೇ ಒಳ್ಳೆಯ ಕಾರ್ಯಕ್ಕೆ ಇಳಿಯುವಾಗಲೂ ಟೀಕೆಗಳು ಬರುವುದು ಸಹಜ. ಆ ಟೀಕೆಗಳಿಗೆ ಜಗ್ಗದೇ ಮುಂದಕ್ಕೆ ಹೆಜ್ಜೆಯಿಡುವ ಸಾಮರ್ಥ್ಯ ಟ್ರಸ್ಟ್‌ನ ಸದಸ್ಯರಿಗಿರಬೇಕು ಎಂದು ಕಿವಿ ಮಾತು ಹೇಳಿದರು.

ಸಭೆಯಲ್ಲಿ ಕುಟುಂಬದ ವಿವಿಧ ಸದಸ್ಯರು ತಮ್ಮ ಅನಿಸಿಕೆಗಳನ್ನು, ಸಲಹೆಗಳನ್ನು ಪರಸ್ಪರ ಹಂಚಿಕೊಂಡರು. ಶೀಘ್ರದಲ್ಲೇ ಕುಟುಂಬದ ಎಲ್ಲ ಸದಸ್ಯರ ಸಮಗ್ರ ವಿವರಗಳುಳ್ಳ 'ಕುಟುಂಬ ವೃಕ್ಷ'ವೊಂದರ ಪುಟ್ಟ ಕೈ ಪಿಡಿಯೊಂದನ್ನು ಸಿದ್ಧಪಡಿಸು ಬಗ್ಗೆ ಸಭೆಯಲ್ಲಿ ನಿರ್ಣಯಿಸಲಾಯಿತು.

ಮುಖ್ಯ ಅತಿಥಿಯಾಗಿ ಟ್ರಸ್ಟ್‌ನ ಇನ್ನೋರ್ವ ಗೌರವ ಸಲಹೆಗಾರ ಅಬ್ದುಲ್ ರಹಿಮಾನ್ ಕೆರೆಮೂಲೆ, ಖ್ಯಾತ ವೈದ್ಯ ಡಾ. ಮುಹಮ್ಮದ್ ಅಶ್ರಫ್, ಟ್ರಸ್ಟ್‌ನ ಕಾರ್ಯದರ್ಶಿ ಎಂ. ಅಬ್ದುಲ್ ರಹಿವಾನ್ ವೇದಿಕೆಯಲ್ಲಿ ಉಪಸ್ಥಿತಿತರಿದ್ದರು.

ಮುಹಮ್ಮದ್ ರಾಯಿಫ್ ಅವರು ಕಿರಾಅತ್ ಓದುವ ಮೂಲಕ ಕಾರ್ಯಕ್ರಮ ಆರಂಭವಾಯಿತು. ಟ್ರಸ್ಟ್‌ನ ಅಧ್ಯಕ್ಷರಾದ ಎಂ. ಬಿ. ಸಲೀಂ ಮಠ ಅವರು ನೆರೆದ ಗಣ್ಯರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಟ್ರಸ್ಟ್‌ನ ಉದ್ದೇಶ ಮತ್ತು ಮುಂದಿನ ನಡೆಯ ಕುರಿತು ವಿವರಣೆಗಳನ್ನು ನೀಡಿದರು. ಟ್ರಸ್ಟ್‌ನ ಸದಸ್ಯ ಬಿ. ಎಂ. ಬಶೀರ್ ಕಾರ್ಯಕ್ರಮ ನಿರೂಪಿಸಿದರು. ಇನ್ನೋರ್ವ ಸದಸ್ಯ ಎಂ. ಬಿ. ನಝೀರ್ ಮಠ ಧನ್ಯವಾದ ಸಮರ್ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News