×
Ad

ನ್ಯಾಯಾಂಗ ನಿಂದನೆ: ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಗೈರುಹಾಜರಾದ ನ್ಯಾ.ಕರ್ಣನ್

Update: 2017-02-13 17:26 IST

ಹೊಸದಿಲ್ಲಿ,ಫೆ.13: ಕೋಲ್ಕತಾ ಉಚ್ಚ ನ್ಯಾಯಾಲಯದ ವಿವಾದಾತ್ಮಕ ನ್ಯಾಯಾಧೀಶ ನ್ಯಾ.ಸಿ.ಎಸ್.ಕರ್ಣನ್ ಅವರು ತನ್ನ ವಿರುದ್ಧದ ನ್ಯಾಯಾಂಗ ನಿಂದನೆ ಕ್ರಮಕ್ಕೆ ಸಂಬಂಧಿಸಿದಂತೆ ಸೋಮವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಹಾಜರಾಗಲು ವಿಫಲರಾದರು. ಅವರು ತನ್ನ ಪರವಾಗಿ ನ್ಯಾಯವಾದಿಗಳನ್ನೂ ನೇಮಕಗೊಳಿಸಿಲ್ಲ.

ನ್ಯಾ.ಕರ್ಣನ್ ಅವರಿಗೆ ನೋಟೀಸ್ ಜಾರಿಗೊಳಿಸಿದ್ದರೂ ಅವರು ನ್ಯಾಯಾಲಯದಲ್ಲಿ ಹಾಜರಾಗಿಲ್ಲ. ಅವರ ಗೈರುಹಾಜರಿಗೆ ಕಾರಣ ನಮಗೆ ಗೊತ್ತಿಲ್ಲ. ಹೀಗಾಗಿ ನಾವು ವಿಚಾರಣೆಯನ್ನು ಕೈಗೆತ್ತಿಕೊಳ್ಳುತ್ತಿಲ್ಲ ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ನೇತೃತ್ವದ ಸಪ್ತ ಸದಸ್ಯ ಪೀಠವು ವಿಚಾರಣೆಯನ್ನು ಮೂರು ವಾರಗಳ ಬಳಿಕ ಮುಂದೂಡಿತು.

 ಮದ್ರಾಸ್ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಮತ್ತು ಇತರ ನ್ಯಾಯಾಧೀಶರ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಹೊರಿಸಿ ನ್ಯಾ.ಕರ್ಣನ್ ಅವರು ಪ್ರಧಾನಿ,ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಮತ್ತಿತರರಿಗೆ ಪತ್ರಗಳನ್ನು ಬರೆದಿದ್ದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಅವರ ವಿರುದ್ಧ ಸ್ವಯಂ ಪ್ರೇರಿತವಾಗಿ ನ್ಯಾಯಾಂಗ ನಿಂದನೆ ಕ್ರಮಕ್ಕೆ ಮುಂದಾಗಿದೆ.

ಇಂದಿನ ವಿಚಾರಣೆ ಸಂದರ್ಭ ಪೀಠವು ನ್ಯಾ.ಕರ್ಣನ್ ಅವರು ಫೆ.10ರಂದು ಸರ್ವೋಚ್ಚ ನ್ಯಾಯಾಲಯದ ರಿಜಿಸ್ಟ್ರಾರ್ ಜನರಲ್ ಅವರಿಗೆ ಬರೆದಿದ್ದ ವಿವಾದಾತ್ಮಕ ಪತ್ರವನ್ನೂ ದಾಖಲಿಸಿಕೊಂಡಿತು.

ತಾನು ‘ದಲಿತ ’ನಾಗಿರುವುದರಿಂದ ಮೇಲ್ಜಾತಿಯ ನ್ಯಾಯಾಧೀಶರು ತನ್ನನ್ನು ಬಲಿಪಶುವನ್ನಾಗಿಸುತ್ತಿದ್ದಾರೆ ಮತ್ತು ಈ ವಿಷಯವನ್ನು ಸಂಸತ್ತಿನ ಅವಗಾಹನೆಗೆ ಒಪ್ಪಿಸಬೇಕು ಎಂದು ನ್ಯಾ.ಕರ್ಣನ್ ಈ ಪತ್ರದಲ್ಲಿ ಹೇಳಿದ್ದರು.

ನ್ಯಾ.ಕರ್ಣನ್ ಅವರಿಂದ ಅಧಿಕಾರ ಪಡೆಯದೆ ಕೆಲವು ವಕೀಲರು ವಿಚಾರಣೆ ವೇಳೆ ಹಾಜರಾಗಿದ್ದನ್ನು ಗಂಭೀರವಾಗಿ ಪರಿಗಣಿಸಿದ ಪೀಠವು, ನ್ಯಾಯಾಂಗ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಿದ್ದಕ್ಕಾಗಿ ಅವರ ವಿರುದ್ಧ ಕ್ರಮ ಜರುಗಿಸುವುದಾಗಿ ತಿಳಿಸಿತು.

ನಿಮ್ಮ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮವನ್ನೇಕೆ ಜರುಗಿಸಬಾರದು ಎನ್ನುವುದನ್ನು ಖುದ್ದಾಗಿ ಹಾಜರಾಗಿ ವಿವರಿಸುವಂತೆ ಸರ್ವೋಚ್ಚ ನ್ಯಾಯಾಲಯವು ಫೆ.8ರಂದು ನ್ಯಾ.ಕರ್ಣನ್‌ಗೆ ನೋಟಿಸ್ ಹೊರಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News