ಯುವಜನಾಂಗಕ್ಕೆ ಅಂಬೇಡ್ಕರ್ ಸ್ಪೂರ್ತಿ: ಡಾ.ಜಯರಾಮ್ ಶೆಟ್ಟಿಗಾರ್
ಉಡುಪಿ, ಫೆ.13: ಬದುಕಿನ ಎಲ್ಲಾ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಅವುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿಕೊಂಡು, ತಳಮಟ್ಟದಿಂದ ಬೆಳೆದು ರಾಷ್ಟ್ರನಾಯಕರಾದ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಜೀವನ ಕಥನವು ಈಗಿನ ಯುವಪೀಳಿಗೆಗೆ ಬದುಕಿನ ಸವಾಲುಗಳನ್ನು ಎದುರಿಸಲು ಸ್ಪೂರ್ತಿ ನೀಡಬಲ್ಲದು ಎಂದು ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಜಯರಾಮ್ ಶೆಟ್ಟಿಗಾರ್ ತಿಳಿಸಿದ್ದಾರೆ.
ಉಡುಪಿ ವಾರ್ತಾ ಹಾಗೂ ಜನಸಂಪರ್ಕ ಇಲಾಖೆಯ ಸಹಯೋಗದಲ್ಲಿ ಇತ್ತೀಚೆಗೆ ಮಿಲಾಗ್ರಿಸ್ ಕಾಲೇಜಿನಲ್ಲಿ ‘ಭಾರತ ಭಾಗ್ಯ ವಿಧಾತ’ ಡಾ. ಅಂಬೇಡ್ಕರ್‌ರವರ ಜನ್ಮಶತಮಾನೋತ್ತರ ರಜತ ಮಹೋತ್ಸವದ ಅಂಗವಾಗಿ ನಡೆದ ಮಂಗಳೂರು ವಿ.ವಿ.ಮಟ್ಟದ ವಿದ್ಯಾರ್ಥಿ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಅಂಬೇಡ್ಕರ್ ಮತ್ತು ಪತ್ರಿಕೋದ್ಯಮ, ಮಹಾಡ್ ಸತ್ಯಾಗ್ರಹ, ಹಿಂದು ಕೋಡ್ ಬಿಲ್, ಅಂಬೇಡ್ಕರರ ಸಾಮಾಜಿಕ ಹೋರಾಟ, ಧಾರ್ಮಿಕ ನಿಲುವು ಮುಂತಾದ ವಿಷಯಗಳ ಕುರಿತು ವಿವಿಧ ಕಾಲೇಜುಗಳಿಂದ ಆಗಮಿಸಿದ ವಿದ್ಯಾರ್ಥಿಗಳಾದ ಯಶಸ್ವಿನಿ, ಸುಧೀರ್ ಮರಕಾಲ, ಕಿರಣ್, ರಕ್ಷಿತಾ, ರೊಸಾಲಿಯ ಕಾರ್ಡೋಸ, ರಾಕೇಶ್ ಶೆಟ್ಟಿ ರಾಜೇಂದ್ರ ತಮ್ಮ ಪ್ರಬಂಧವನ್ನು ಮಂಡಿಸಿದರು.
ವಾರ್ತಾಧಿಕಾರಿ ರೋಹಿಣಿ, ಕಾರ್ಯಕ್ರಮ ಸಂಘಟಕ ಪ್ರೊ.ಸಿರಿಲ್ ಮಥಾಯಸ್ ಉಪಸ್ಥಿತರಿದ್ದರು. ಆದರ್ಶ್ ಕಾರ್ಯಕ್ರಮ ನಿರೂಪಿಸಿದರು.