ಬಂಟ್ವಾಳ : ಹಾವು ಕಡಿದು ವಿದ್ಯಾರ್ಥಿ ಸಾವು
Update: 2017-02-13 18:35 IST
ಬಂಟ್ವಾಳ,ಫೆ.13: ತಾಲೂಕಿನ ಕಾವಳಪಡೂರು ಗ್ರಾಮದ ಮಧ್ವ ಎಂಬಲ್ಲಿ ಹಾವು ಕಡಿದು ಗಾಯಗೊಂಡಿದ್ದ ವಿದ್ಯಾರ್ಥಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ನಡೆದಿದೆ.
ಮೃತರನ್ನು ಸ್ಥಳೀಯ ನಿವಾಸಿ ಚೆನ್ನಪ್ಪ ಗೌಡ ಎಂಬವರ ಪುತ್ರ ಧನಂಜಯ(18) ಎಂದು ಗುರುತಿಸಲಾಗಿದೆ. ಮಂಗಳೂರಿನಲ್ಲಿ ಹೊಟೇಲ್ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಯಾಗಿದ್ದ ಇವರು ಶನಿವಾರ ಮನೆಗೆ ಬಂದು ಸಂಜೆ ವೇಳೆಗೆ ಪಕ್ಕದ ಅಂಗಡಿಗೆ ಹೋಗುತ್ತಿದ್ದ ವೇಳೆ ಕಾಲುದಾರಿಯಲ್ಲಿ ಕಾಲಿಗೆ ಹಾವೊಂದು ಕಚ್ಚಿದ ಅನುಭವ ಉಂಟಾಗಿತ್ತು ಎನ್ನಲಾಗಿದೆ.
ಇದಕ್ಕೆ ತಕ್ಷಣವೇ ನಾಟಿ ವೈದ್ಯರೊಬ್ಬರಿಂದ ಔಷಧಿ ಹಚ್ಚಿ ಬಳಿಕ ರಾತ್ರಿ ಮಲಗಿದ ಬಳಿಕ ತಲೆ ಸುತ್ತು ಬರುತ್ತಿದ್ದ ಹಿನ್ನೆಲೆಯಲ್ಲಿ ಇವರನ್ನು ಬೆಳ್ತಂಗಡಿ ಆಸ್ಪತ್ರೆಗೆ ಸಾಗಿಸಿದ್ದಾರೆ. ರವಿವಾರ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ ಎಂದು ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸು ತಿಳಿಸಿದ್ದಾರೆ. ಮೃತರು ತಂದೆ, ತಾಯಿ ಮತ್ತು ಮೂವರು ಸಹೋದರಿಯರನ್ನು ಅಗಲಿದ್ದಾರೆ.