ಚೀನಾಕ್ಕೆ ಕ್ಯಾಂಪ್ಕೊ ಅಡಿಕೆ ರಫ್ತು ಯೋಜನೆ: ಗುಣಮಟ್ಟ ಅರ್ಹತೆಯೊಂದಿಗೆ ಪ್ರಥಮ ಕಂತಿನ ಸರಕು ಸ್ವೀಕೃತ

Update: 2017-02-13 13:15 GMT

ಮಂಗಳೂರು,ಫೆ.13:ಅಡಿಕೆಯ ಬೇಡಿಕೆಯನ್ನು ಹೊಂದಿರುವ ಚೀನಾ ದೇಶಕ್ಕೆ ಭಾರತದ ಅಡಿಕೆಯನ್ನು ಕಳುಹಿಸುವ ಮೂಲಕ ದೇಶೀಯ ಅಡಿಕೆ ಮಾರುಕಟ್ಟೆಯ ಬಲಸಂವರ್ಧನೆಗೆ ಕ್ಯಾಂಪ್ಕೊ ಕೈಗೊಂಡಿರುವ ದೂರಗಾಮಿ ಯೋಜನೆಯ ಪ್ರಥಮ ಪ್ರಯತ್ನ ಯಶಸ್ವಿಯಾಗಿದೆ. ಇಲ್ಲಿನ ಅಡಿಕೆ ತನ್ನ ಗುಣಮಟ್ಟ ಅರ್ಹತೆಯೊಂದಿಗೆ ಅಲ್ಲಿ ಸ್ವೀಕೃತವಾಗಿದೆ.

ಪ್ರ್ರಾಯೋಗಿಕವಾಗಿ ಚೀನಾಕ್ಕೆ ಪ್ರಥಮ ಕಂತಿನಲ್ಲಿ ಕಳುಹಿಸಲಾದ ‘ಇಲ್ಲಿನ ಎಳತು ಸಂಸ್ಕರಿತ ಅಡಿಕೆಯು ಅಲ್ಲಿನ ಪ್ರತಿಷ್ಠಿತ, ಕೃಷಿ ಕೈಗಾರಿಕಾ ಪ್ರಮಾಣ ಪ್ರಾಧಿಕಾರದ’ ಗುಣಮಟ್ಟ ಪರೀಕ್ಷೆಯಲ್ಲಿ - ಭಾರತದ  ಒಣ ಅಡಿಕೆಯು ಸರ್ವ ಮಾನ್ಯತೆಯ ಅರ್ಹ ಉತ್ಪನ್ನವೆಂದು ದೃಢೀಕರಿಸಲ್ಪಟ್ಟಿರುವುದು ಇದೀಗ ವರದಿಯಾಗಿದೆ.

‘ಚೀನಾಕ್ಕೆ ಕಳುಹಿಸಲಾದ ಅಡಿಕೆಯನ್ನು ಶಿವಮೊಗ್ಗ, ಪುತ್ತೂರು ಹಾಗೂ ಕೊಯಂಬುತ್ತೂರು ಭಾಗಗಳಿಂದ ಸಂಗ್ರಹಿಸಲಾಗಿದೆ. ಅಲ್ಲಿನ ಆಯ್ದ ಎಳತು ಅಡಕೆಯನ್ನು ಪುತ್ತೂರಿನಲ್ಲಿ ಪರಿಷ್ಕರಣೆಗೊಳಿಸಲಾಗಿದ್ದು, ಬಳಿಕ ಭಾರತ ಸರಕಾರದ, ಸಸ್ಯ ಸಂಸರ್ಗ ನೀಷೇಧ ವಿಧಿ ವಿಜ್ಞಾ’ ಪ್ರಯೋಗಾಲಯದಲ್ಲಿ ಗುಣಮಟ್ಟ ಪರೀಕ್ಷೆಗೊಳಪಡಿಸಿ ದೃಢೀಕರಣಗೊಳಿಸಲಾಗಿದೆ.

  ಚೀನಾದ ಕುವಿವಾಂಗ್ (ಕಿಂಗ್ ಆಫ್ ಟೇಸ್ಟ್) ಸಂಸ್ಥೆಯೊಂದಿಗಿನ ಒಡಂಬಡಿಕೆಯನ್ವಯ ಕ್ಯಾಂಪ್ಕೊ ಈ ರಫ್ತು ವ್ಯವಹಾರ ನಡೆಸಿದ್ದು, ಅಡಕೆಯಲ್ಲ್ಲಿ ಹಸಿರು ಬಣ್ಣವನ್ನು ಉಳಿಸಿಕೊಂಡಿರುವ ಹಸಿ ಎಳತು ಅಡಿಕೆಯ ಬಗ್ಗೆ ಅದು ವಿಶೇಷ ಒಲವನ್ನು ತೋರಿದೆ. ಉತ್ತಮ ಗುಣಮಟ್ಟವನ್ನು ಹೊಂದಿರುವ ಇಲ್ಲಿನ ಮೊಹಿತ್ ನಗರ ಜಾತಿಯ ಅಡಿಕೆಯನ್ನು ತರಿಸಿಕೊಳ್ಳಲು ಚೀನಾ ಉತ್ಸುಕವಾಗಿದೆ ಎಂದು ತಿಳಿದು ಬಂದಿದೆ.

ಗುಟ್ಕಾ ನೀಷೇಧದಂತಹ ಸುಧಾರಣಾ ಕ್ರಮಗಳು ಅಡಿಕೆ ಮಾರುಕಟ್ಟೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಿ, ಮಾರುಕಟ್ಟೆಯ ತಲ್ಲಣಕ್ಕೆ ಕಾರಣವಾಗುತ್ತಿರುವ ಈ ಸಂದರ್ಭದಲ್ಲಿ ಕೃಷಿಕರಿಗೆ ಸಾಂತ್ವನವಾಗಿ ಚೀನಾಕ್ಕೆ ಅಡಿಕೆ ರಫ್ತು ಮಾಡುವ ಈ ಯೋಜನೆ ರೂಪುಗೊಳ್ಳುತ್ತಿರುವುದು ಆಶಾಜನಕವಾಗಿದೆ. ಈ ಯೋಜನೆ ಕಾರ್ಯಗತಗೊಳ್ಳುವುದರಿಂದ ಅಡಿಕೆ ಕೃಷಿಕರ ಆರ್ಥಿಕ ಉನ್ನತಿಯಾಗಿ ಕೃಷಿಕರ ಹಿತರಕ್ಷಣೆ ಸಾಧ್ಯವಾಗುವುದೆಂಬ ಆಶಯವನ್ನು ಕ್ಯಾಂಪ್ಕೊ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News