ಜನವಾದಿ ಮಹಿಳಾ ಸಂಘಟನೆಯಿಂದ ಧರಣಿ
ಮಂಗಳೂರು, ಫೆ.13: ಮಹಿಳೆ ಇಂದು ಜಾತಿ, ಧರ್ಮದ ಕಟ್ಟುಕಟ್ಟಲೆಯ ಮಧ್ಯೆ ಬದುಕು ಸಾಗಿಸುತ್ತಿದ್ದಾಳೆ. ಸಾಮರಸ್ಯದ ಮಧ್ಯೆ ಕೌಟುಂಬಿಕ ದೌರ್ಜನ್ಯಗಳ ವಿರುದ್ಧವೂ ಹೋರಾಟ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾಳೆ. ಮಹಿಳೆಯರ ಮೇಲೆ ದೌರ್ಜನ್ಯ ನಡೆದಾಗ ಪುರುಷ ಪ್ರಧಾನ ವ್ಯವಸ್ಥೆ ಅದನ್ನು ಪ್ರತಿಭಟಿಸಲು ಎಲ್ಲ ರೀತಿಯ ಸಹಕಾರ ನೀಡಬೇಕು ಎಂದು ಸಾಹಿತಿ ಚಂದ್ರಕಲಾ ನಂದಾವರ ಹೇಳಿದರು.
ಜಿಲ್ಲೆಯಲ್ಲಿ ಮಹಿಳೆಯರ ಮೇಲಾಗುವ ದೌರ್ಜನ್ಯವನ್ನು ಖಂಡಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ವತಿಯಿಂದ ಸೋಮವಾರ ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆದ ಧರಣಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯು ಶ್ರೀಮಂತರ ಮತ್ತು ಬಡವರ ಮನೆ ಎಂಬ ವ್ಯತ್ಯಾಸಲ್ಲದೆ ಶೋಷಣೆಗೆ ಒಳಗಾಗುತ್ತಾಳೆ. ಒಲೆಯ ಎದುರುಗಡೆಯ ಬಿಸಿಯೂ ಸೇರಿಕೊಂಡು ಎಲ್ಲ ಸಾಮಾಜಿಕ ಬಿಸಿಯನ್ನು ಆಕೆ ಎದುರಿಸುತ್ತಿದ್ದಾಳೆ ಎಂದ ಚಂದ್ರಕಲಾ ನಂದಾವರ, 500 ಮತ್ತು 1,000 ರೂ. ನೋಟಿನ ಮಾನ್ಯತೆ ರದ್ದು ಮಾಡಿದಾಗ ಹೆಚ್ಚು ತೊಂದರೆಗೆ ಒಳಗಾಗಿರುವುದು ಮಹಿಳೆಯರು. ಧರ್ಮದ ಹೆಸರಿನಲ್ಲಿ ಮಹಿಳೆಯರ ಮೇಲೆ ಅತ್ಯಂತ ಹೀನಾಯವಾಗಿ ದೌರ್ಜನ್ಯ ನಡೆಯುತ್ತಿದೆ. ಮಹಿಳೆ ಜಾತಿ, ಧರ್ಮ, ಭಾಷೆಯನ್ನು ಮೀರಿ ಬದುಕು ಸಾಗಿಸುತ್ತಿದ್ದಾರೆ ಎಂದರು.
ಸಂಘಟನೆಯ ಜಿಲ್ಲಾಧ್ಯಕ್ಷೆ ಜಯಂತಿ ಬಿ. ಶೆಟ್ಟಿ ಮಾತನಾಡಿ ಜಿಲ್ಲೆಯ ಅಭಿವೃದ್ಧಿಗಾಗಿ ಶೇ.50ರಷ್ಟು ಇರುವ ಮಹಿಳೆಯರು ಅಪಾರ ಕೊಡುಗೆ ನೀಡಿದ್ದಾರೆ. ಆದರೆ ಈವತ್ತು ಗ್ರಾಮೀಣ ಪ್ರದೇಶದ ರೈತ ಮಹಿಳೆಯು ಸರಕಾರದ ನೀತಿಯಿಂದ ಕಂಗಾಲಾಗಿದ್ದಾಳೆ. ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಬಲಿಷ್ಠಗೊಳಿಸಬೇಕು. ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಕೇಸುಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದರೂ ಸರಿಯಾದ ರೀತಿಯಲ್ಲಿ ಕಾನೂನು ಕ್ರಮ ಆಗುತ್ತಿಲ್ಲ. ಮಹಿಳೆಗೆ ವಸತಿ, ಆರೋಗ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಸಮಾನ ಕೆಲಸಕ್ಕೆ ಸಮಾನ ವೇತನವನ್ನು ಮಹಿಳೆಗೆ ನೀಡಬೇಕೆಂದು ಒತ್ತಾಯಿಸಿದರು.
ಪದ್ಮಾವತಿ ಶೆಟ್ಟಿ, ಕಿರಣ ಪ್ರಭಾ, ಭಾರತಿ ಬೋಳಾರ, ವಾಸುದೇವ ಉಚ್ಚಿಲ್ ಮಾತನಾಡಿದರು. ಧರಣಿ ಸತ್ಯಾಗ್ರಹದ ನೇತೃತ್ವವನ್ನು ಗಿರಿಜಾ, ಭವ್ಯಾ, ಬಬಿತಾ, ಲಕ್ಷ್ಮೀ, ನಳಿನಾಕ್ಷಿ, ಹೇಮಲತಾ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ರಾಧಾ ಮೂಡುಬಿದಿರೆ ಸ್ವಾಗತಿಸಿದರು. ಪುಷ್ಪಾ ವಂದಿಸಿದರು.