ಕೋಲ್‌ಮಾಲ್: ಜಾರ್ಖಂಡ್‌ನ ಕಂಪೆನಿ ವಿರುದ್ಧ ಮೊಕದ್ದಮೆ ದಾಖಲು
ಹೊಸದಿಲ್ಲಿ,ಫೆ.13: ಜಾರ್ಖಂಡ್‌ನಲ್ಲಿ ಕಲ್ಲಿದ್ದಲು ನಿಕ್ಷೇಪವೊಂದನ್ನು ಪಡೆದುಕೊಳ್ಳುವುದಕ್ಕಾಗಿ ದಾಖಲೆಗಳನ್ನ್ನು ತಿರುಚಿದ್ದಾರೆಂಬ ಆರೋಪದಲ್ಲಿ ರಾಂಚಿ ಮೂಲದ ಕಂಪೆನಿಯೊಂದರ ವಿರುದ್ಧ ವಿಶೇಷ ಸಿಬಿಐ ನ್ಯಾಯಾಲಯ ದೋಷಾರೋಪ ದಾಖಲಿಸಿಕೊಂಡಿದೆ. ಮೆಸರ್ಸ್ ಡೊಮ್ಕಾ ಪ್ರೈ.ಲಿಮಿಟೆಡ್ ಹಾಗೂ ಅದರ ಮೂವರು ನಿರ್ದೇಶಕರಾದ ಬಿನಯ್ ಪ್ರಕಾಶ್, ವಸಂತ್ ದಿವಾಕರ್ ಮಂಜ್ರೇಕರ್ ಹಾಗೂ ಪರಮಾನಂದ ಮೊಂಡಲ್, ಚಾರ್ಟರ್ಡ್ ಅಕೌಂಟೆಂಟ್‌ಗಳಾದ ಮನೋಜ್ ಕುಮಾರ್ ಗುಪ್ತಾ ಹಾಗೂ ಸಂಜಯ್ ಖಂಡೇಲ್‌ವಾಲ್ ವಿರುದ್ಧ ವಿಶೇಷ ಸಿಬಿಐ ನ್ಯಾಯಾಧೀಶ ಭರತ್ ಪರಾಶರ್ ಅವರು ವಂಚನೆ ಹಾಗೂ ಕ್ರಿಮಿನಲ್ ಸಂಚಿನ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆದಾಗ್ಯೂ ಪ್ರಕರಣದ ಇನ್ನೋರ್ವ ಆರೋಪಿ ಸುಖ್‌ದೇವ್ ಪ್ರಸಾದ್ ಎಂಬವರ ವಿರುದ್ಧದ ಆರೋಪಗಳಿಗೆ ಮೇಲ್ನೋಟಕ್ಕೆ ಯಾವುದೇ ಸಾಕ್ಷಾಧಾರಗಳು ಲಭ್ಯವಾಗದ ಹಿನ್ನೆಲೆಯಲ್ಲಿ ಅವರನ್ನು ದೋಷಮುಕ್ತಗೊಳಿಸಿದೆ.
ಒಡಿಶಾದ ರಾಯ್‌ರಂಗ್‌ಪುರ್‌ನಲ್ಲಿ ವಾರ್ಷಿವಾಗಿ ಎರಡು ಲಕ್ಷ ಟನ್ ಕಲ್ಲಿದ್ದಲನ್ನು ಉತ್ಪಾದನೆಗಾಗಿ, ಕಲ್ಲಿದ್ದಲು ನಿವೇಶನವನ್ನು ಒದಗಿಸುವಂತೆ ಕೋರಿ ಡೊಮ್ಕಾ ಪ್ರೈ.ಲಿಮಿಟೆಡ್ ಕಂಪೆನಿಯು ಉಕ್ಕು ಸಚಿವಾಲಯ ಹಾಗೂ ಕಲ್ಲಿದ್ದಲು ಸಚಿವಾಲಯಕ್ಕೆ ಅರ್ಜಿಯನ್ನು ಸಲ್ಲಿಸಿತ್ತು.
ಕಂಪೆನಿಯು ಸಲ್ಲಿಸಿದ ಮಾಹಿತಿಗಳು ಹಾಗೂ ದಾಖಲೆಗಳ ಆಧಾರದಲ್ಲಿ ಅಂತಿಮವಾಗಿ ಕಲ್ಲಿದ್ದಲು ಸಚಿವಾಲಯವು ಜಾರ್ಖಂಡ್‌ನ ಲಾಲ್‌ಘರ್‌ನಲ್ಲಿ ಕಲ್ಲಿದ್ದಲು ನಿವೇಶನವನ್ನು ಮಂಜೂರು ಮಾಡಿತ್ತು. ಆದರೆ ಕಂಪೆನಿಯು ಕಲ್ಲಿದ್ದಲು ಹಾಗೂ ಉಕ್ಕು ಸಚಿವಾಲಯಗಳಿಗೆ ಸುಳ್ಳು ದಾಖಲೆಗಳನ್ನು ಒದಗಿಸಿರುವುದಾಗಿ ವಿಚಾರಣೆಯಲ್ಲಿ ಬಯಲಾಗಿತ್ತು.