ಯುದ್ಧ ಹಡಗುಗಳ ರಿಪೇರಿ : ಅಮೆರಿಕ ನೌಕಾಪಡೆ ಜೊತೆ ರಿಲಾಯನ್ಸ್ ಒಡಂಬಡಿಕೆ
ಹೊಸದಿಲ್ಲಿ,ಫೆ.13: ಭಾರತ ಹಾಗೂ ಅಮೆರಿಕವು ಕೆಲವು ಪ್ರಮುಖ ವ್ಯೆಹಾತ್ಮಕ ಒಡಬಂಡಿಕೆಗಳಿಗೆ ಸಹಿಹಾಕಿದ ಕೆಲವು ತಿಂಗಳುಗಳ ಬಳಿಕ, ರಿಲಾಯನ್ಸ್ ಸಂಸ್ಥೆಯು, ಭಾರತ ಹಾಗೂ ಆಸುಪಾಸಿನ ಸಾಗರಪ್ರದೇಶಗಳ ಮುಂಚೂಣಿಯಲ್ಲಿ ನಿಯೋಜಿತವಾಗಿರುವ ಸೆವೆಂತ್ ಫ್ಲೀಟ್‌ನ ಯುದ್ಧ ಹಡಗುಗಳನ್ನು ರಿಪೇರಿಗೊಳಿಸುವ ಹಾಗೂ ಮಾರ್ಪಾಡುಗಳನ್ನು ಮಾಡುವ ಸೇವೆಗಳನ್ನು ಒದಗಿಸಲು ಅಮೆರಿಕ ನೌಕಾಪಡೆಯ ಜೊತೆ ಒಪ್ಪಂದ ಮಾಡಿಕೊಂಡಿದೆ.
ಪಶ್ಚಿಮ ಪೆಸಿಫಿಕ್ ಹಾಗೂ ಹಿಂದೂ ಮಹಾಸಾಗರದಲ್ಲಿ ಅಮೆರಿಕ ನೌಕಾಪಡೆಯ ಸೆವೆಂತ್‌ಫ್ಲೀಟ್‌ಗೆ ಸೇರಿದ 50-70 ಯುದ್ಧಹಡಗುಗಳು, 140 ವಿಮಾನಗಳನ್ನು ನಿಯೋಜಿಸಲ್ಪಟ್ಟಿದ್ದು, ಸುಮಾರು 20 ಸಾವಿರ ನಾವಿಕರು ಕಾರ್ಯಾಚರಿಸುತ್ತಿದ್ದಾರೆ.
ರಿಲಾಯನ್ಸ್ ಇನ್‌ಫ್ರಾಸ್ಟ್ರಕ್ಚರ್(ರಿನ್‌ಫ್ರಾ) ನಿಯಂತ್ರಣದ ಆರ್‌ಡಿಇಎಲ್ ಇಂದು ಪತ್ರಿಕಾಹೇಳಿಕೆಯೊಂದನ್ನು ನೀಡಿ, ಅಮೆರಿಕದ ನೌಕಾಪಡೆಯ ಜೊತೆ ಬೃಹತ್ ಹಡಗು ರಿಪೇರಿ ಒಪ್ಪಂದ (ಎಂಎಸ್‌ಆರ್‌ಎ)ಕ್ಕೆ ಸಹಿಹಾಕಿರುವುದಾಗಿ ತಿಳಿಸಿದೆ. ಗುಜರಾತ್‌ನ ಪಿಪಾವಾವ್‌ನಲ್ಲಿರುವ ರಿಲಾಯನ್ಸ್ ಶಿಪ್‌ಯಾರ್ಡ್, ಅಮೆರಿಕ ನೌಕಾಪಡೆಯ ಸೆವೆಂತ್‌ಫ್ಲೀಟ್‌ಗೆ ಸೇರಿದ ಹಡಗುಗಳ ಸರ್ವಿಸಿಂಗ್‌ಹಾಗೂ ರಿಪೇರಿ ಕೆಲಸಗಳನ್ನು ಕೈಗೊಳ್ಳುವುದಕ್ಕಾಗಿ ಎಂಎಸ್‌ಆರ್‌ಎ ಪ್ರಮಾಣಪತ್ರ ಪಡೆದ ಭಾರತದ ಪ್ರಪ್ರಥಮ ನೌಕಾಂಗಣ (ಶಿಪ್‌ಯಾರ್ಡ್) ಆಗಿದೆ.
2016ರ ಆಕ್ಟೋಬರ್ ಮಾಸಾಂತ್ಯದಲ್ಲಿ ಅಮೆರಿಕ ಸರಕಾರದ ಪ್ರತಿನಿಧಿಗಳು ವಿಸ್ತೃತವಾದ ಸ್ಥಳ ಸಮೀಕ್ಷೆ ನಡೆಸಿದ ಆನಂತರ ರಿಲಾಯನ್ಸ್ ಶಿಪ್‌ಯಾರ್ಡ್ ಆಯ್ಕೆಯಾಗಿದೆಯೆಂದು ಹೇಳಿಕೆಯು ತಿಳಿಸಿದೆ.