ಆಧಾರ್ ಮಸೂದೆಗೆ ಧನಮಸೂದೆಯ ಪಟ್ಟವನ್ನು ಪ್ರಶ್ನಿಸಿರುವ ಅರ್ಜಿಗೆ ಸರಕಾರದ ವಿರೋಧ
ಹೊಸದಿಲ್ಲಿ,ಫೆ.13: ಧನ ಮಸೂದೆಯ ವ್ಯಾಪ್ತಿಗೊಳಪಡಿಸಲು ಎಲ್ಲ ಸಾಂವಿಧಾನಿಕ ಅಗತ್ಯಗಳನ್ನು ಪೂರೈಸಿದೆ ಎಂಬ ಕಾರಣವನ್ನು ನೀಡಿ ಆಧಾರ್ ಮಸೂದೆಯನ್ನು ಧನಮಸೂದೆಯನ್ನಾಗಿ ಪ್ರಮಾಣೀಕರಿಸಿದ್ದ ಲೋಕಸಭಾ ಸ್ಪೀಕರ್ ನಿರ್ಧಾರವನ್ನು ಪ್ರಶ್ನಿಸಿ ಹಿರಿಯ ಕಾಂಗ್ರೆಸ್ ನಾಯಕ ಜೈರಾಮ ರಮೇಶ ಅವರು ಸಲ್ಲಿಸಿರುವ ಅರ್ಜಿಯನ್ನು ಸರಕಾರವು ಸೋಮವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಬಲವಾಗಿ ವಿರೋಧಿಸಿತು.
ರಮೇಶ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಪಿ.ಚಿದಂಬರಂ ಅವರ ವಾದಗಳನ್ನು ಎದುರಿಸಿದ ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ ಅವರು, ಧನ ಮಸೂದೆ ಕುರಿತಂತೆ ಅಭಿಪ್ರಾಯದ ಯಾವುದೇ ಅಧಿಕಾರ ರಾಜ್ಯಸಭೆಗೆ ಇಲ್ಲ, ಹೀಗಾಗಿ ಅಲ್ಲಿ ಪರಿಶೀಲನೆಯನ್ನು ನಿವಾರಿಸಲು ಆಧಾರ್ ಮಸೂದೆಯನ್ನು ಧನಮಸೂದೆಯನ್ನಾಗಿ ಪ್ರಮಾಣೀಕರಿಸಲಾಗಿತ್ತು ಎಂದರು.
ಸ್ಪೀಕರ್ ನಿರ್ಧಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ, ಅದೂ ಅಲ್ಲದೆ ಆಧಾರ್‌ನೊಂದಿಗೆ ಜೋಡಣೆಗೊಂಡಿರುವ ಎಲ್ಲ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳಿಗೆ ಎಲ್ಲ ವೆಚ್ಚವನ್ನು ಏಕೀಕೃತ ನಿಧಿಯ ಮೂಲಕ ಪಡೆಯಲಾಗುತ್ತಿ ್ತರುವುದರಿಂದ ಧನಮಸೂದೆಯನ್ನಾಗಿ ಪ್ರಮಾಣೀಕರಿಸಲು ಎಲ್ಲ ಸಾಂವಿಧಾನಿಕ ಅಗತ್ಯಗಳನ್ನು ಆಧಾರ ಮಸೂದೆಯು ಪೂರೈಸಿತ್ತು ಎಂದು ರೋಹಟ್ಗಿ ಪ್ರತಿಪಾದಿಸಿದರು.
ಆಧಾರ್ ಮಸೂದೆಯನ್ನು ಧನಮಸೂದೆಯನ್ನಾಗಿ ಪ್ರಮಾಣೀಕರಿಸಿದ್ದ ಲೋಕಸಭಾ ಸ್ಪೀಕರ್ ನಿರ್ಧಾರವನ್ನು ಪರಿಶೀಲಿಸುವಂತೆ ಒತ್ತಾಯಿಸಿದ ಚಿದಂಬರಂ, ಯಾವುದನ್ನು ಧನಮಸೂದೆಯನ್ನಾಗಿ ಪ್ರಮಾಣೀಕರಿಸಬಹುದು ಎನ್ನುವುದನ್ನು ನೋಡುವುದು ಮುಖ್ಯವಾಗುತ್ತದೆ ಎಂದರು.
ಅಟಾರ್ನಿ ಜನರಲ್ ಎತ್ತಿರುವ ಎಲ್ಲ ಆಕ್ಷೇಪಗಳನ್ನು ಪರಿಶೀಲಿಸುವಂತೆ ಚಿದಂಬರಂ ಅವರಿಗೆ ಸೂಚಿಸಿದ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ನೇತೃತ್ವದ ಪೀಠವು ವಿಚಾರಣೆಯನ್ನು ನಾಲ್ಕು ವಾರಗಳ ಬಳಿಕ ಮುಂದೂಡಿತು.