ಉಡುಪಿ ಜಿಲ್ಲಾ ಬಂದ್‌ಗೆ ನೀರಸ ಪ್ರತಿಕ್ರಿಯೆ : ರಾ.ಹೆದ್ದಾರಿಯಲ್ಲಿ ಸಂಚಾರ ವ್ಯತ್ಯಯ
ಉಡುಪಿ, ಫೆ.13: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹೆಜಮಾಡಿ ಮತ್ತು ಸಾಸ್ತಾನದ ಗುಂಡ್ಮಿಯಲ್ಲಿ ನಿರ್ಮಿಸಿರುವ ಟೋಲ್‌ಗೇಟ್‌ಗಳಲ್ಲಿ ಸ್ಥಳೀಯ ಖಾಸಗಿ ವಾಹನಗಳಿಗೆ ಟೋಲ್ ಶುಲ್ಕದಿಂದ ವಿನಾಯಿತಿಯೂ ಸೇರಿದಂತೆ ತಮ್ಮ ಹಲವು ಬೇಡಿಕೆಗಳ ಈಡೇರಿಕೆಗಾಗಿ ರಾ.ಹೆದ್ದಾರಿ ಹೋರಾಟ ಸಮಿತಿ ಕರೆ ನೀಡಿದ ಉಡುಪಿ ಜಿಲ್ಲಾ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಖಾಸಗಿ ಬಸ್‌ಗಳಾವುದೂ ಹೆದ್ದಾರಿಯಲ್ಲಿ ಓಡದ ಕಾರಣ ಜನರ ನಿತ್ಯ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.
ಬೆಳಗ್ಗೆ ಕುಂದಾಪುರ ಮತ್ತು ತೆಕ್ಕಟ್ಟೆಗಳಲ್ಲಿ ಒಂದಷ್ಟು ಮಂದಿ ಸೇರಿ ಬಸ್‌ಗಳ ಸಂಚಾರಕ್ಕೆ ಅಡ್ಡಿ ಪಡಿಸಿದ್ದು, ಬಳಿಕ ಪಡುಬಿದ್ರಿಯಲ್ಲಿ ಜನ ಜಿಲ್ಲಾಡಳಿತದ ಕ್ರಮವನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದನ್ನು ಬಿಟ್ಟರೆ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ.
ಇಂದು ಕರೆ ನೀಡಲಾದ ಜಿಲ್ಲಾ ಬಂದ್ ಶಾಂತಿಯುತವಾಗಿ ಮುಕ್ತಾಯ ಗೊಂಡಿದ್ದು, ಜಿಲ್ಲೆಯ ಎಲ್ಲಿಂದಲೂ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ. ಬಂದ್‌ಗೆ ಸಂಬಂಧಿಸಿದಂತೆ ನಾವು ಯಾರನ್ನೂ ಬಂಧಿಸಿಲ್ಲ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಷ್ಣು ವರ್ಧನ್ ತಿಳಿಸಿದರು. ಪಡುಬಿದ್ರಿಯಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾದರೂ, ಉಡುಪಿ ತಹಶೀಲ್ದಾರ್ ಸ್ಥಳಕ್ಕೆ ಬಂದು ಜಿಲ್ಲಾಧಿಕಾರಿ ಪರವಾಗಿ ಹೋರಾಟಗಾರರಿಗೆ ಆಶ್ವಾಸನೆ ನೀಡಿದ ಬಳಿಕ ಜನರು ಪ್ರತಿಭಟನೆ ಕೈಬಿಟ್ಟು ಶಾಂತಿಯುತವಾಗಿ ಚದುರಿದರು ಎಂದು ಅವರು ಹೇಳಿದರು.
ಬೈಂದೂರು ಶಿರೂರಿನಿಂದ ಹೆಜಮಾಡಿಯವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಯಾವುದೇ ಎಕ್ಸ್‌ಪ್ರೆಸ್ ಮತ್ತು ಸರ್ವಿಸ್ ಬಸ್‌ಗಳು ಓಡಾಡದ ಕಾರಣ, ಜಿಲ್ಲೆಯ ಗ್ರಾಮೀಣ ಭಾಗಗಳಿಂದ ಉಡುಪಿ-ಮಂಗಳೂರುಗಳಿಗೆ ತೆರಳುವ ಜನರು ಬಸ್‌ಗಳಿಲ್ಲದೇ ಪರದಾಡುವಂತಾಯಿತು. ಹೆಜಮಾಡಿಯಿಂದ ಪಡುಬಿದ್ರಿ, ಕಾಪುವರೆಗೆ, ಬ್ರಹ್ಮಾವರದಿಂದ ಸಾಸ್ತಾನ, ಸಾಲಿಗ್ರಾಮ, ತೆಕ್ಕಟ್ಟೆ, ಕುಂದಾಪುರಗಳಲ್ಲಿ ಕೆಲವು ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು ಬಿಟ್ಟರೆ ಉಳಿದಂತೆ ಬಂದ್ ಜನರ ಮೇಲೆ ಯಾವುದೇ ಪ್ರಭಾವ ಬೀರಲಿಲ್ಲ.
ಉಡುಪಿಯಲ್ಲಿ ಬೆಳಗಿನಿಂದಲೇ ಸಿಟಿ ಬಸ್‌ಗಳೆಲ್ಲವೂ ಎಂದಿನಂತೆ ಓಡಾಟ ನಡೆಸಿದವು. ಅವುಗಳ ಸಂಚಾರಕ್ಕೆ ಯಾವುದೇ ವ್ಯತ್ಯಯವಾಗಲಿಲ್ಲ. ಈ ಸಿಟಿ ಬಸ್‌ಗಳು ಉತ್ತರದಲ್ಲಿ ಕಲ್ಯಾಣಪುರ ಹಾಗೂ ದಕ್ಷಿಣದಲ್ಲಿ ಕಟಪಾಡಿಯವರೆಗೆ ಓಡಾಟ ನಡೆಸಿದವು. ರಿಕ್ಷಾ, ಟ್ಯಾಕ್ಸಿಗಳ ಸಂಚಾರವೂ ಎಂದಿನಂತಿತ್ತು. ಉಡುಪಿಯಲ್ಲಂತೂ ಜನಜೀವನ ಸಾಮಾನ್ಯವಾಗಿತ್ತು. ಅಂಗಡಿ, ಮುಂಗಟ್ಟು, ಹೊಟೇಲ್‌ಗಳೆಲ್ಲವೂ ತೆರೆದಿದ್ದವು.
ಕುಂದಾಪುರ ಹಾಗೂ ಮಂಗಳೂರು ಕಡೆಯಿಂದ ಬಸ್‌ಗಳ ಸಂಚಾರ ನಿಂತಿದ್ದರಿಂದ ಜನರ ಓಡಾಟ ವಿರಳವಾಗಿತ್ತು. ಉಡುಪಿ ನಗರಸಭೆ ಹೊರತು ಪಡಿಸಿ ಹೊರಗಿನಿಂದ ಜನರು ವಿರಳವಾಗಿ ಉಡುಪಿಗೆ ಬಂದ ಕಾರಣ ಇಲ್ಲಿನ ವ್ಯಾಪಾರ, ವಹಿವಾಟು ತೀರಾ ಮಂದವಾಗಿತ್ತು ಎಂದು ಅಂಗಡಿ ಮತ್ತು ಹೊಟೇಲ್‌ಗಳ ಮಾಲಕರು ಚಿಂತಿತರಾಗಿ ನುಡಿದರು.
ಉಡುಪಿ ಬಸ್‌ನಿಲ್ದಾಣದಲ್ಲಿ ಮಂಗಳೂರು ಮತ್ತು ಕುಂದಾಪುರ ಕಡೆಗಳಿಗೆ ಹೋಗುವ ಬಸ್‌ಗಳು ಸಂಚರಿಸಲೇ ಇಲ್ಲ. ಆದರೆ ಕೆ.ಜಿ.ರೋಡ್ ಮೂಲಕ ಪೆರ್ಡೂರಿನತ್ತ ಹೋಗುವ ಹಾಗೂ ಮಣಿಪಾಲ ಮೂಲಕ ಕಾರ್ಕಳ, ಮೂಡಬಿದರೆ, ಧರ್ಮಸ್ಥಳದತ್ತ ತೆರಳುವ ಎಲ್ಲಾ ಬಸ್‌ಗಳು ಎಂದಿನಂತೆ ಸಂಚರಿಸಿದವು.
ಹೊರಜಿಲ್ಲೆಗಳ ಸರಕಾರಿ ಬಸ್‌ಗಳು ಸಹ ಎಂದಿನಂತೆ ಓಡಾಡಿದರೂ, ಪಡುಬಿದ್ರಿಯಲ್ಲಿ ಪ್ರತಿಭಟನೆ ಜೋರಾದಾಗ, ಕೆಲವು ಬಸ್‌ಗಳನ್ನು ಉಡುಪಿ ಬಸ್‌ನಿಲ್ದಾಣದಲ್ಲೇ ಉಳಿಸಿಕೊಳ್ಳಲಾಯಿತು. ಅಪರಾಹ್ನ 2:00ಗಂಟೆಯ ಬಳಿಕ ಮಂಗಳೂರು, ಕುಂದಾಪುರ ಕಡೆಗೆ ಕೆಎಸ್ಸಾರ್ಟಿಸಿ ಬಸ್ ಸಂಚಾರ ಯಥಾಪ್ರಕಾರ ನಡೆಯಿತು.
ಉಡುಪಿಯಲ್ಲಿ ಶಾಲಾ-ಕಾಲೇಜುಗಳು, ಸರಕಾರಿ ಕಚೇರಿಗಳು, ಬ್ಯಾಂಕ್ ಎಂದಿನಂತೆ ಕಾರ್ಯನಿರ್ವಹಿಸಿದರೆ, ಬ್ರಹ್ಮಾವರ, ಸಾಸ್ತಾನ, ಕೋಟ, ಕುಂದಾಪುರಗಳಲ್ಲಿ ಕೆಲವು ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಆದರೆ ಬ್ಯಾಂಕ್-ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು.
ಮುಂಜಾಗ್ರತಾ ಕ್ರಮವಾಗಿ ಉಡುಪಿ ತಾಲೂಕಿನಾದ್ಯಂತ, ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಹಾಗೂ ತೆಕ್ಕಟ್ಟೆಯಿಂದ ಶಿರೂರುವರೆಗೆ ರಾಷ್ಟ್ರೀಯ ಹೆದ್ದಾರಿ 66ರ ಇಕ್ಕೆಲಗಳ ಎರಡು ಕಿ.ಮೀ.ವ್ಯಾಪ್ತಿಯಲ್ಲಿ ಕಳೆದ ಮಧ್ಯರಾತ್ರಿ ಯಿಂದಲೇ ನಿಷೇಧಾಜ್ಞೆಯನ್ನು ವಿಧಿಸಲಾಗಿತ್ತು. ಟೋಲ್‌ಗೇಟ್ ಪರಿಸರ ಹಾಗೂ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಬಿಗುಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಗೊಳಿಸಲಾಗಿತ್ತು.
ಸಾಸ್ತಾನದ ರಾಷ್ಟ್ರೀಯ ಹೆದ್ದಾರಿ ಜಾಗೃತ ಸಮಿತಿಯ ಸದಸ್ಯರ ನಿಯೋಗವೊಂದು ಉಡುಪಿ ತಹಶೀಲ್ದಾರ್ ಮಹೇಶ್ಚಂದ್ರ ಅವರಿಗೆ ಟೋಲ್ ಸಂಗ್ರಹದ ಸಂಬಂಧ ಮನವಿಯೊಂದನ್ನು ಅರ್ಪಿಸಿತು.