ಅಲಿಗಡ ಮುಸ್ಲಿಮ್ ವಿವಿಗೆ ಕುಲಪತಿ ಆಯ್ಕೆ,ನೇಮಕದಲ್ಲಿ ಹಸ್ತಕ್ಷೇಪಕ್ಕೆ ಸುಪ್ರೀಂ ನಕಾರ
ಹೊಸದಿಲ್ಲಿ,ಫೆ.13: ಅಲಿಗಡ ಮುಸ್ಲಿಮ್ ವಿಶ್ವವಿದ್ಯಾನಿಲಯ(ಅಮು)ಕ್ಕೆ ನೂತನ ಕುಲಪತಿಯ ಆಯ್ಕೆ ಮತ್ತು ನೇಮಕ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಲು ಸೋಮವಾರ ನಿರಾಕರಿಸಿದ ಸರ್ವೋಚ್ಚ ನ್ಯಾಯಾಲಯವು ಈ ಸಂಬಂಧ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸಿತು.
ಹಾಲಿ ಕುಲಪತಿಯ ನಿವೃತ್ತಿಯ ಬಳಿಕ ನೂತನ ಕುಲಪತಿಯ ನೇಮಕಕ್ಕಾಗಿ ನಡೆಯುತ್ತಿರುವ ಪ್ರಕ್ರಿಯೆಯನ್ನು ಪ್ರಶ್ನಿಸಿದ್ದ ಅರ್ಜಿಯನ್ನು ವಜಾಗೊಳಿಸುವ ಮುನ್ನ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಮತ್ತು ನ್ಯಾ.ಎನ್.ವಿ.ರಮಣ್ ಅವರ ಪೀಠವು ಕುಲಪತಿ ಆಯ್ಕೆ ಪಟ್ಟಿಯಲ್ಲಿರುವ ಮೂವರು ಅಭ್ಯರ್ಥಿಗಳು ಈ ಹುದ್ದೆಗಾಗಿ ಯುಜಿಸಿಯು ನಿಗದಿಗೊಳಿಸಿರುವ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿದ್ದಾರೆ ಎನ್ನುವುದನ್ನು ದಾಖಲಿಸಿಕೊಂಡಿತು.
ತಾನು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯಾಗಿರುವುದರಿಂದ ಯುಜಿಸಿ ಮಾನದಂಡಗಳನ್ನು ಪಾಲಿಸುವುದು ಕಡ್ಡಾಯವಲ್ಲ, ಆದರೆ ಹಾಲಿ ಪ್ರಕ್ರಿಯೆಯಲ್ಲಿ ಐವರು ಅಭ್ಯರ್ಥಿಗಳ ಪೈಕಿ ಎಲ್ಲ ಮೂವರು ಯುಜಿಸಿ ಮಾನದಂಡಕ್ಕನುಗುಣವಾಗಿ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿದ್ದಾರೆ ಎಂದು ಅಮು ನ್ಯಾಯಲಯಕ್ಕೆ ತಿಳಿಸಿತು.