ಇನ್ಫೋಸಿಸ್ ನೇಮಕಾತಿಗಳಲ್ಲಿ ಮೊದಲ ಬಾರಿಗೆ ಕುಸಿತ
ಹೈದರಾಬಾದ್,ಫೆ.13: ಪ್ರತಿಷ್ಠಿತ ಮಾಹಿತಿ ತಂತ್ರಜ್ಞಾನ ಕಂಪನಿ ಇನ್ಫೋಸಿಸ್ ತನ್ನ 33 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಕಡಿಮೆ ಸಂಖ್ಯೆಯಲ್ಲಿ ನೇಮಕಾತಿಗಳನ್ನು ಮಾಡಿಕೊಂಡಿದೆ ಎಂದು ತೆಲಂಗಾಣ ಐಟಿ ಇಲಾಖೆಯ ಕಾರ್ಯದರ್ಶಿ ಜಯೇಶ್ ರಂಜನ್ ಅವರು ಇನ್ಫಿಯ ಸಹಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಅವರನ್ನು ಉಲ್ಲೇಖಿಸಿ ಇಂದಿಲ್ಲಿ ತಿಳಿಸಿದರು.
ಪ್ರತಿವರ್ಷ 20,000-25,000 ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತಿದ್ದ ಇನ್ಫೋಸಿಸ್ ಪ್ರಸಕ್ತ ಹಣಕಾಸು ವರ್ಷದಲ್ಲಿ ಈವರೆಗೆ ಸುಮಾರು 6,000 ಉದ್ಯೋಗಿಗಳನ್ನಷ್ಟೇ ನೇಮಿಸಿಕೊಂಡಿದೆ. ನಾರಾಯಣ ಮೂರ್ತಿಯವರು ಇತ್ತೀಚಿಗೆ ತನಗೆ ಈ ಮಾಹಿತಿ ನೀಡಿದ್ದರು ಎಂದು ‘ಇಂಡಿಯಾಸಾಫ್ಟ್-2017’ ಸಮ್ಮೇಳನದಲ್ಲಿ ಮಾತನಾಡುತ್ತಿದ್ದ ಅವರು ಹೇಳಿದರು.ಬಯೊಏಷ್ಯಾ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ನಾರಾಯಣ ಮೂರ್ತಿ ಕಳೆದ ವಾರ ನಗರಕ್ಕೆ ಭೇಟಿ ನೀಡಿದ್ದರು.
ಪ್ರಸಕ್ತ ವರ್ಷದಲ್ಲಿ 7,000 ಉದ್ಯೋಗಿಗಳು ಇನ್ಫೋಸಿಸ್ ತೊರೆದಿದ್ದಾರೆ.
ಡಿ.31,2016ಕ್ಕೆ ಇದ್ದಂತೆ ಇನ್ಫೋಸಿಸ್ 1,99,763 ಉದ್ಯೋಗಿಗಳನ್ನು ಹೊಂದಿತ್ತು.