ಮಾನವ ಕಂಪ್ಯೂಟರ್ ಅಂಧ ವಿದ್ಯಾರ್ಥಿ ಸಿದ್ದುವಿಗೆ ಐಎಎಸ್ ಕನಸು...
ಮಂಗಳೂರು,ಫೆ.13:ಬೆಂಗಳೂರಿನ ಎಂ.ಎಸ್.ರಾಮಯ್ಯ ಕಾಲೇಜಿನಲ್ಲಿ ಕಾನೂನು ಪದವಿ ಪಡೆದ ಸಿದ್ದು ಎಸ್.ಲವಟಿ ಅಂಧ ವಿದ್ಯಾರ್ಥಿಯಾಗಿದ್ದರೂ ಕಂಪ್ಯೂಟರಿಗಿಂತ ವೇಗವಾಗಿ ಗಣಿತದ ಪ್ರಶ್ನೆಗಳಿಗೆ ಉತ್ತರ ನೀಡುವ ಸಾಮರ್ಥ್ಯ ಹೊಂದಿದ್ದು ಮಾನವ ಕಂಪ್ಯೂಟರ್ ಎಂದು ಖ್ಯಾತಿ ಪಡೆದಿದ್ದ ಶಕುಂತಲಾ ದೇವಿಗೆ ಸರಿಸಮಾನವಾಗಿ ವೇಗವಾಗಿ ಉತ್ತರ ನೀಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ .ಎಲ್‌ಎಲ್‌ಬಿ ಓದುತ್ತಿರುವ ಸಿದ್ದುವಿಗೆ ಮುಂದೆ ಅವರಿಗೆ ಐಎಎಸ್ ಪಾಸ್ ಮಾಡುವ ಗುರಿ ಇದೆ ಎಂದು ಆತನ ಮಾರ್ಗದರ್ಶಕ ಸುರೇಶ್ ಸುದ್ದಿಗೋಷ್ಟಿಯಲ್ಲಿಂದು ತಿಳಿಸಿದ್ದಾರೆ.
ಪ್ರಖರವಾದ ನೆನಪಿನ ಶಕ್ತಿಯನ್ನು ಹೊಂದಿರುವ ಸಿದ್ದುವಿಗೆ ಸುಮಾರು ಐವತ್ತು ಸಾವಿರಕ್ಕೂ ಅಧಿಕ ದೂರವಾಣಿ ಸಂಖ್ಯೆ ಅವರ ನೆನಪಿನ ಬುತ್ತಿಯಲ್ಲಿದೆ.25ಲಕ್ಷಗಳ ದಿನಾಂಕ ಹೇಳಿದರೆ ದಿನದ ಹೆಸರನ್ನು ಹೇಳುವ ಸಾಮರ್ಥ್ಯ ಹೊಂದಿದ್ದಾರೆ.
ಹುಬ್ಬಳ್ಳಿಯ ಸೀತಾ ಮತ್ತು ಶಂಕರ ಎಂಬ ರೈತ ದಂಪತಿಗಳ ಎರಡನೆ ಮಗನಾಗಿ ಹುಟ್ಟಿದ ಸಿದ್ದು ಹುಟ್ಟಿನಿಂದ ಅಂಧತ್ವ ಇದೆ ಎಂದು ತಂದೆ ತಾಯಿಗೆ ಮೊದಲು ಗೊತ್ತಿರಲಿಲ್ಲ.ಗೊತ್ತಾದ ಬಳಿಕ ಆತನನ್ನು ಹುಬ್ಬಳ್ಳಿಯ ಅಂಧ ಮಕ್ಕಳ ಶಾಲೆಗೆ ನೆರೆಹೊರೆಯವರ ಪ್ರಯತ್ನದಿಂದ ಸೇರಿಸಿದರು.ಶಾಲೆಗೆ ಸೇರಿದ ಆರಂಭದಿಂದಲೇ ಒಂದನೆ ತರಗತಿಯಲ್ಲಿ ನೂರರವರೆಗೆ ಮಗ್ಗಿ ಹೇಳುತ್ತಿದ್ದ ಸಿದ್ದು ಬಳಿಕ ಬೆಳಗಾವಿಯಲ್ಲಿ ಮಾಧ್ಯಮ ಶಿಕ್ಷಣ ಮುಗಿಸಿ ಎಸ್‌ಎಸ್‌ಎಲ್‌ಸಿಯಲ್ಲಿ ಶೇ 80 ಅಂಕಗಳೊಂದಿಗೆ ತೇರ್ಗಡೆಯಾದರು.ಆತ್ಮ ವಿಶ್ವಾಸದ ಊರುಗೋಲಿನೊಂದಿಗೆ ಬೆಳೆದು ಬಂದ ಸಿದ್ದು ಪ್ರಸಕ್ತ ಬೆಂಗಳೂರಿನ ರಾಮಯ್ಯ ಕಾಲೇಜಿನಲ್ಲಿ ಐದನೇ ವರುಷದ ಎಲ್‌ಎಲ್‌ಬಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.
ಐಎಎಸ್ ಕನಸು: ಮುಂದೆ ಐಎಎಸ್ ಪರೀಕ್ಷೆ ಬರೆಯಬೇಕು ಅದನ್ನು ಪಾಸುಮಾಡಬೇಕು ಎನ್ನುವ ಕನಸು ಸಿದ್ದುವಿಗಿದೆ.ಆದರೆ ಅದಕ್ಕಾಗಿ ಬ್ರೈಲಿ ಸೆನ್ಸರ್ ನೋಟ್ ಟೇಕರ್ ಮತ್ತು ಬ್ರೈಲಿ ಟ್ರಾನ್ಸ್‌ಲೇಟರ್ ಬೇಕಾಗುತ್ತದೆ.ಇದಕ್ಕಾಗಿ ಒಟ್ಟು ನಾಲ್ಕು ಲಕ್ಷ ರೂ ಬೇಕಾಗುತ್ತದೆ.ದಾನಿಗಳ ನೆರವು ದೊರೆತರೆ ಆತನ ಕನಸು ಈಡೇರಬಹುದು ಎನ್ನುವುದು ಸಿದ್ದು ಅವರ ಸಹಾಯಕ ಸುರೇಶ್ ಅವರು ಅಭಿಪ್ರಾಯ ಪಡುತ್ತಾರೆ.
(ಸಿದ್ದು ಅವರ ಸಂಪರ್ಕ ದೂರವಾಣಿ +91 9980068440)