ಅಮೆರಿಕ: ಅಣೆಕಟ್ಟು ಕುಸಿಯುವ ಭೀತಿ :2 ಲಕ್ಷ ಜನರ ಸ್ಥಳಾಂತರಕ್ಕೆ ತುರ್ತು ಆದೇಶ
Update: 2017-02-13 21:04 IST
ಓರೊವಿಲ್ (ಅಮೆರಿಕ), ಫೆ. 13: ಅಮೆರಿಕದ ಅತಿ ಎತ್ತರದ ಅಣೆಕಟ್ಟಿನ ದ್ವಾರವೊಂದು ಕುಸಿಯುವ ಅಪಾಯವನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ, ಸ್ಥಳಾಂತರಗೊಳ್ಳುವಂತೆ ಕೆಳ ಪ್ರದೇಶದಲ್ಲಿ ವಾಸಿಸುವ ಸುಮಾರು 2 ಲಕ್ಷ ಜನರಿಗೆ ಸೋಮವಾರ ಮುಂಜಾನೆ ದಿಢೀರ್ ಸೂಚನೆ ನೀಡಲಾಗಿದೆ.
ನಾರ್ತ್ ಕ್ಯಾಲಿಫೋರ್ನಿಯದಲ್ಲಿರುವ ಲೇಕ್ ಓರೊವಿಲ್ ಅಣೆಕಟ್ಟಿನ ತುರ್ತು ದ್ವಾರವೊಂದು ಕುಸಿಯುತ್ತಿದ್ದು ಯಾವುದೇ ಕ್ಷಣದಲ್ಲಿ ಬೀಳಬಹುದು ಹಾಗೂ ಫೆದರ್ ನದಿಯುದ್ದಕ್ಕೂ ವಾಸಿಸುತ್ತಿರುವ ಗ್ರಾಮೀಣ ಪ್ರದೇಶಗಳಿಗೆ ಪ್ರವಾಹದ ನೀರು ನುಗ್ಗಬಹುದು ಎಂಬ ಎಚ್ಚರಿಕೆಯನ್ನು ಅಧಿಕಾರಿಗಳು ನೀಡಿದ್ದಾರೆ.
‘‘ಓರೊವಿಲ್‌ನ ಕೆಳ ಭಾಗದಲ್ಲಿರುವ ಜನರನ್ನು ತಕ್ಷಣ ತೆರವುಗೊಳಿಸಲು ಆದೇಶ ನೀಡಲಾಗಿದೆ’’ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಾಕಿರುವ ಹೇಳಿಕೆಯೊಂದರಲ್ಲಿ ಬ್ಯುಟ್ ಕೌಂಟಿ ಶರೀಫ್ ಹೇಳಿದ್ದಾರೆ.