ಗಾಝಾ ಗಡಿದಾಟು ತೆರೆಯಲು ಇಸ್ರೇಲ್ ನಿರ್ಧಾರ: ವರದಿ
Photo Credit : aljazeera.com
ಜೆರುಸಲೇಂ, ಡಿ.3: ಗಾಝಾಕ್ಕೆ ಪ್ರವೇಶ ಕಲ್ಪಿಸುವ ಪ್ರಮುಖ ಹೆಬ್ಬಾಗಿಲು, ರಫಾ ಗಡಿದಾಟು(ಬಾರ್ಡರ್ ಕ್ರಾಸಿಂಗ್) ಮತ್ತೆ ತೆರೆಯುವುದಾಗಿ ಇಸ್ರೇಲ್ ಬುಧವಾರ ಘೋಷಿಸಿದೆ.
ಇಸ್ರೇಲ್‍ನ ಭದ್ರತಾ ಅನುಮೋದನೆ ಪಡೆದ ನಂತರ ಮತ್ತು ಯುರೋಪಿಯನ್ ಯೂನಿಯನ್ ನಿಯೋಗದ ಮೇಲ್ವಿಚಾರಣೆಯಲ್ಲಿ, ಈಜಿಪ್ಟ್ ನೊಂದಿಗೆ ಸಮನ್ವಯತೆಯೊಂದಿಗೆ ಫೆಲೆಸ್ತೀನೀಯರು ರಫಾ ಗಡಿದಾಟು ಮೂಲಕ ಗಾಝಾದಿಂದ ನಿರ್ಗಮಿಸಲು ಸಾಧ್ಯವಾಗುತ್ತದೆ ಎಂದು ಗಾಝಾದಲ್ಲಿ ಮಾನವೀಯ ವಿಷಯಗಳ ಮೇಲೆ ನಿಗಾ ವಹಿಸುವ ಇಸ್ರೇಲ್ ಮಿಲಿಟರಿಯ ಸಹಸಂಸ್ಥೆ `ಕೊಗಾಟ್' ಅನ್ನು ಉಲ್ಲೇಖಿಸಿ `ದಿ ಟೈಮ್ಸ್ ಆಫ್ ಇಸ್ರೇಲ್' ವರದಿ ಮಾಡಿದೆ.
ವಿಶ್ವಸಂಸ್ಥೆಯ ಪ್ರಕಾರ, ಗಾಝಾದಲ್ಲಿ ಸುಮಾರು 16,500 ಜನರಿಗೆ ವೈದ್ಯಕೀಯ ಆರೈಕೆಯ ಅವಶ್ಯಕತೆಯಿದೆ. ಇವರಲ್ಲಿ ಕೆಲವರು ವೈದ್ಯಕೀಯ ಚಿಕಿತ್ಸೆಗಾಗಿ ಇಸ್ರೇಲ್ ಮೂಲಕ ವಿದೇಶಕ್ಕೆ ತೆರಳಿದ್ದಾರೆ. ಯುದ್ಧ ಆರಂಭಕ್ಕೂ ಮುನ್ನ ರಫಾ ಗಡಿದಾಟು ಗಾಝಾದಲ್ಲಿರುವ ಹೆಚ್ಚಿನ ಫೆಲೆಸ್ತೀನೀಯರಿಗೆ ಹೊರಗಿನ ಪ್ರಪಂಚವನ್ನು ತಲುಪಲು ಏಕೈಕ ನೇರ ನಿರ್ಗಮನ ಸ್ಥಳವಾಗಿದೆ ಮತ್ತು ಪ್ರದೇಶಕ್ಕೆ ಸಹಾಯವನ್ನು ತಲುಪಿಸುವ ಪ್ರಮುಖ ಪ್ರವೇಶ ದ್ವಾರವಾಗಿತ್ತು. ಈ ವರ್ಷದ ಅಕ್ಟೋಬರ್‍ನಲ್ಲಿ ಕದನ ವಿರಾಮ ಜಾರಿಗೆ ಬಂದರೂ, ಎಲ್ಲಾ ಒತ್ತೆಯಾಳುಗಳನ್ನೂ ಹಮಾಸ್ ಬಿಡುಗಡೆಗೊಳಿಸಿದರೆ ಮಾತ್ರ ರಫಾ ಗಡಿದಾಟನ್ನು ತೆರೆಯುವುದಾಗಿ ಇಸ್ರೇಲ್ ಘೋಷಿಸಿತ್ತು.
ಈ ಮಧ್ಯೆ, ಮುಂದಿನ ದಿನಗಳಲ್ಲಿ ರಫಾ ಗಡಿದಾಟನ್ನು ಮತ್ತೆ ತೆರೆಯಲು ಇಸ್ರೇಲ್ ನೊಂದಿಗೆ ಈಜಿಪ್ಟ್ ಸಮನ್ವಯ ಸಾಧಿಸುತ್ತಿದೆ ಎಂಬ ಹೇಳಿಕೆಯನ್ನು ಈಜಿಪ್ಟ್ ನ ಮಾಹಿತಿ ಸೇವಾ ಇಲಾಖೆ ಬುಧವಾರ ನಿರಾಕರಿಸಿದೆ.