ಸ್ಕೂಬಾ ಡೈವಿಂಗ್ ವಿರುದ್ಧ ಮೀನುಗಾರರ ಪ್ರತಿಭಟನೆ: 12 ಮಂದಿ ವಿರುದ್ಧ ಪ್ರಕರಣ ದಾಖಲು
ಭಟ್ಕಳ,ಫೆ.13: ಉತ್ತರಕನ್ನಡ ಜಿಲ್ಲಾಡಳಿತದಿಂದ ಸ್ಕೂಬಾ ಡೈವಿಂಗ್ ನಡೆಸುವುದಕ್ಕೆ ಅನುಮತಿ ನೀಡಿದ್ದರೂ ಇದರಿಂದಾಗಿ ಸಮುದ್ರದಲ್ಲಿನ ಜೀವಸಂಕುಲಕ್ಕೆ ತೊಂದರೆಯಾಗುತ್ತದೆ ಎಂದು ಆರೋಪಿಸಿ ನೂರಾರು ಮೀನುಗಾರರು ಪ್ರತಿಭಟನೆ ನಡೆಸಿದ ಘಟನೆ ರವಿವಾರ ಮುರುಡೇಶ್ವರದಲ್ಲಿ ಜರಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಆದೇಶದ ವಿರುದ್ಧ ಪ್ರತಿಭಟನೆ ನಡೆಸಿದ ಹಾಗೂ ಪ್ರವಾಸಿಗರ ಮೇಲೆ ಹಲ್ಲೆಗೈದ ಆರೋಪದಲ್ಲಿ ಜಿಲ್ಲಾಧಿಕಾರಿ ಆದೇಶದ ಮೇಗೆ ಮುರುಡೇಶ್ವರದ ಶಾಂತಿ ಹರಿಕಂತ್ರ, ಕುಸುಮಾ ಹರಿಕಾಂತ, ಮಾದೇವಿ ಹರಿಕಾಂತ, ವನಿತಾ ಹರಿಕಾಂತ, ಜಯಶ್ರೀ ಹರಿಕಾಂತ, ಮೋಹಿನಿ ಹರಿಕಾಂತ, ರಾಘು ಹರಿಕಂತ್ರ, ಮಂಜು ಹರಿಕಾಂತ, ಈಶ್ವರ ಹರಿಕಾಂತ, ಮಂಜುನಾಥ ಹರಿಕಾಂತ, ಗೋಪಿ ಹರಿಕಾಂತ ಎಂದು ಹೆಸರಿಸಲಾಗಿದೆ. ಘಟನೆಗೆ ಪ್ರಚೋದನೆ ನೀಡಿದ್ದಾರೆ ಎಂಬ ಕಾರಣ ನೀಡಿ ಇಲ್ಲಿನ ನಾಡದೋಣಿ ಮೀನುಗಾರರ ಸಂಘಟನೆಯ ಅಧ್ಯಕ್ಷ ಕೃಷ್ಣ ನಾರಾಯಣ ಹರಿಕಾಂತ ಎಂಬುವವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆ ಹಿನ್ನೆಲೆ: ಉತ್ತರಕನ್ನಡ ಜಿಲ್ಲಾಡಳಿತದಿಂದ ಅಧಿಕೃತ ಪರವಾನಿಗೆ ಪಡೆದ ಸ್ಕೂಬಾ ಡೈವಿಂಗ್ ವಿರುದ್ಧ ರವಿವಾರ ದಂದು ಪ್ರತಿಭಟನೆ ನಡೆಸಿದ ಸ್ಥಳಿಯ ಮೀನುಗಾರರು ನೇತ್ರಾಣಿ ದ್ವೀಪ ಜೀವ ವೈವಿಧ್ಯತೆಗೆ ಹೆಸರುವಾಸಿಯಾಗಿದೆ. ಈ ಧ್ವೀಪದ ಆಸುಪಾಸಿನಲ್ಲಿ ವಿಶಿಷ್ಟ ಜಾತಿಯ ಮೀನುಗಳು, ಮುತ್ತು, ಹವಳಗಳು ಹೇರಳವಾಗಿದೆ. ಈ ದ್ವೀಪದ ಬಳಿ ಸ್ಕೂಬಾ ಡೈವಿಂಗ್ ನಡೆಸುವುದರಿಂದ ಮೀನಿನ ಸಂತತಿಯ ಮೇಲೆ ಗಂಭೀರವಾದ ಪರಿಣಾಮವನ್ನು ಬೀರುತ್ತಿದೆ. ಇದು ನೈಸರ್ಗಿಕ ಮೀನುಗಾರಿಕೆಯಲ್ಲಿ ತೊಡಗಿಕೊಂಡಿರುವ ಮೀನುಗಾರರ ಬದುಕಿಗೂ ತೊಂದರೆಯನ್ನುಂಟು ಮಾಡುತ್ತಿದೆ ಎಂದು ಆರೋಪಿಸಿ ಪ್ರವಾಸಿಗರನ್ನು ಕೊಂಡೊಯ್ಯುತ್ತಿದ್ದ ಸ್ಕೂಬಾ ಡೈವಿಂಗ್ ನ್ನು ನಿಲ್ಲಿಸಬೇಕು ಎಂದು ಪ್ರತಿಭಟನೆಗಿಳಿದ ಮಹಿಳೆಯರು ಪ್ರವಾಸಿಗರ ಮೇಲೆ ಹಲ್ಲೆಯನ್ನು ಮಾಡಲು ಮುಂದಾಗಿದ್ದರು ಎಂದು ಹೇಳಲಾಗುತ್ತಿದೆ.
ಸ್ಕೂಬಾ ಡೈವಿಂಗ್ ಪರವಾನಿಗೆಯ ಬಗ್ಗೆಯೂ ಅಧಿಕಾರಿಗಳು ಧ್ವಂದ್ವದ ಹೇಳಿಕೆಯನ್ನು ನೀಡುತ್ತ ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಸ್ಕೂಬಾ ಡೈವಿಂಗ್ಗಾಗಿ ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳಿಂದ ಅನುಮತಿಯನ್ನು ಪಡೆದುಕೊಂಡೇ ಸ್ಕೂಬಾ ಡೈವಿಂಗ್ಗಾಗಿ ಪ್ರವಾಸಿಗರನ್ನು ಕರೆದೊಯ್ಯುತ್ತಿರುವುದಾಗಿ ದೋಣಿಯ ಮಾಲಕರು ಹೇಳುತ್ತಿದ್ದಂತೆಯೇ ಜನರು ಇನ್ನಷ್ಟು ಕುಪಿತರಾಗಿ ದೋಣಿಯನ್ನು ದಡಕ್ಕೆ ಎಳೆಯಲು ಮುಂದಾದರು. ಇದರಿಂದ ಕೆಲ ಕಾಲ ಉದ್ವಿಗ್ನದ ವಾತಾವರಣ ನಿರ್ಮಾಣವಾಗಿತ್ತು.
ಪ್ರತಿಭಟನೆಯನ್ನು ಹಿಮ್ಮೆಟ್ಟಿಸಲು ಪೊಲೀಸರು ಲಘು ಲಾಠಿ ಪ್ರಹಾರಕ್ಕೆ ಮುಂದಾಗಿದ್ದರಾದರೂ, ಪ್ರತಿಭಟನಾಕಾರರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಇದ್ದುದರಿಂದ ಕಸಿವಿಸಿಗೊಂಡ ಪೊಲೀಸರು ಹಿಂದಡಿ ಇಟ್ಟರು. ಪ್ರತಿಭಟನೆ ಇನ್ನೊಂದು ಮಗ್ಗಲಿಗೆ ವಾಲುವ ಲಕ್ಷಣದ ಬಗ್ಗೆ ಮಾಹಿತಿ ಪಡೆದುಕೊಂಡ ಶಾಸಕ ಮಂಕಾಳು ವೈದ್ಯ, ಜಿಪಂ ಸದಸ್ಯ ಆಲ್ಬರ್ಟ ಸ್ಥಳಕ್ಕೆ ಬಂದು ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು.
ಸುದ್ದಿ ತಿಳಿದ ಪೊಲೀಸರು ಸಿಪಿಐ ಸುರೇಶ ನಾಯಕ್ ನೇತೃತ್ವದಲ್ಲಿ ಸ್ಥಳಕ್ಕೆ ಬಂದು ಪ್ರತಿಭಟನಾಕಾರರನ್ನು ಚೆದುರಿಸಲು ಯತ್ನಿಸಿದರು. ಈ ಹಂತದಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ತೀವೃ ವಾಗ್ವಾದ ನಡೆಯಿತು.
ಇಂದಿನ ಬೆಳವಣೆಗೆ: ಜಿಲ್ಲಾಧಿಕಾರಿಯಿಂದ ಅಧಿಕೃತ ಆದೇಶ ಪಡೆದು ನಡೆಸುತ್ತಿರುವ ಸ್ಕೂಬಾ ಡೈವಿಂಗ್ ನ ಪ್ರವಾಸಿಗರ ಮೇಲೆ ಹಲ್ಲೆ ನಡೆಸದ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಜಿಲ್ಲಾಧಿಕಾರಿ ಎಸ್.ಎಸ್.ನಕುಲ ಈ ಪ್ರಕರಣಕ್ಕೆ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಜರಗಿಸಲು ಮುಂದಾಗಿದ್ದು ಹಲ್ಲೆ ನಡೆಸಿದವರ ವಿರುದ್ಧ ಪ್ರಕರಣ ದಾಖಲಿಸುವಂತೆ ಮುರ್ಡೇಶ್ವರ ಪೊಲೀಸರಿಗೆ ಆದೇಶಿಸಿದ್ದ ಹಿನ್ನೆಲೆಯಲ್ಲಿ 12 ಮೀನುಗಾರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮುರುಡೇಶ್ವರ ಪೊಲೀಸರು ತಿಳೀಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ಭೇಟಿ ಮಾಡಲು ಬಂದ ಮೀನುಗಾರರನ್ನು ಜಿಲ್ಲಾಧಿಕಾರಿಗಳು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಪ್ರವಾಸಿಗರ ಮೇಲೆ ಹಲ್ಲೆ ಮಾಡಿದ ವಿಡಿಯೋವನ್ನು ಮೀನುಗಾರರ ಮುಂದೆ ಪ್ರದರ್ಶನ ಮಾಡಿಸಿ ತರಾಟೆಗೆ ತೆಗೆದುಕೊಂಡಿದ್ದ ಪ್ರವಾಸಿಗರ ಮೇಲೆ ಹಲ್ಲೆ ಮಾಡಲು ನಿಮಗೆ ಅಧಿಕಾರ ಕೊಟ್ಟವರು ಯಾರು ಎಂದು ಜಿಲ್ಲಾಧಿಕಾರಿ ಪ್ರಶ್ನಿಸಿದ್ದಾರೆ. ಸ್ಕೂಬಾ ಡ್ರೈವಿಂಗ್ ಬಂದ್ ಮಾಡುವಂತೆ ಮೀನುಗಾರರು ಪರಿಪರಿಯಾಗಿ ವಿನಂತಿಸಿಕೊಂಡರು ಖ್ಯಾರೇ ಎನ್ನದ ಜಿಲ್ಲಾಧಿಕಾರಿ ನಕುಲ್ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸೋದಾಗಿ ಹೇಳಿದ್ದಾರೆ. ಮೀನುಗಾರರು ಬಂದಿದ್ದ ಟೆಂಪೋಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.