6 ತಿಂಗಳಲ್ಲೇ ಕುರ್‌ಆನ್ ಕಂಠಪಾಠ ಮಾಡಿದ ಬಾಲಕ

Update: 2017-02-13 17:30 GMT

ಪುತ್ತೂರು,ಫೆ.13: ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ ಎಂಬ ಮಾತಿನಂತೆ ಪುತ್ತೂರಿನಲ್ಲಿ ಓರ್ವ ಬಾಲಕ ಕೇವಲ 6 ತಿಂಗಳಲ್ಲಿ ಕುರ್‌ಆನ್ ಕಂಠಪಾಠ ಮಾಡುವ ಮೂಲಕ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದ್ದಾನೆ.

ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಕುಂಬ್ರ ಎಂಬಲ್ಲಿರುವ ಬಡ ಮತ್ತು ಅನಾಥರ ಶಿಕ್ಷಣ ಸಂಸ್ಥೆಯಲ್ಲಿ ಕಲಿಯುತ್ತಿರುವ ಈ ವಿದ್ಯಾರ್ಥಿ ಶಾಲಾ ಶಿಕ್ಷಣದ ಜೊತೆಗೆ ಧಾರ್ಮಿಕ ಶಿಕ್ಷಣವನ್ನು ಕಲಿಯುತ್ತಿದ್ದು, ಕೇವಲ 6 ತಿಂಗಳಲ್ಲೇ ಕುರ್‌ಆನ್ ಕಂಠಪಾಠ ಮಾಡುವ ಮೂಲಕ ತಾನು ಕಲಿಯುತ್ತಿರುವ ಸಂಸ್ಥೆಗೆ ಮತ್ತು ಶಿಕ್ಷಕರಿಗೆ ಕೀರ್ತಿ ತಂದಿದ್ದಾನೆ.

ಸುಳ್ಯ ತಾಲೂಕು ಬೆಳ್ಳಾರೆ ಸಮೀಪದ ನೆಟ್ಟಾರು ನಿವಾಸಿ ಮುಹಮ್ಮದ್ ಮುಸ್ಲಿಯಾರ್ ಅವರ ಕೊನೆಯ ಪುತ್ರ ಮುಹಮ್ಮದ್ ಸಾಲಿಂ (14) ಸಾಧನೆ ಮಾಡಿದ ಬಾಲಕ. ಮುಹಮ್ಮದ್ ಮುಸ್ಲಿಯಾರ್ ಅವರಿಗೆ ನಾಲ್ಕು ಗಂಡು ಹಾಗೂ ಮೂವರು ಹೆಣ್ಣು ಮಕ್ಕಳು. ಈ ಪೈಕಿ ಮುಹಮ್ಮದ್ ಸಾಲಿಂ ಕೊನೆಯ ಪುತ್ರ. ಮಸೀದಿ ಗುರುಗಳಾಗಿ ಸೇವೆ ಸಲ್ಲಿಸುತ್ತಿರುವ ಮುಸ್ಲಿಯಾರ್ ಅವರು ಆರ್ಥಿಕ ಸಮಸ್ಯೆಯ ಕಾರಣದಿಂದ ಕರ್ನಾಟಕ ಇಸ್ಲಾಮಿಕ್ ಅಕಾಡೆಮಿಗೆ ಒಳಪಟ್ಟ ಈ ಸಂಸ್ಥೆಗೆ ಕಳೆದ ಜುಲೈ ತಿಂಗಳಲ್ಲಿ ದಾಖಲಿಸಿದ್ದರು. ಸಂಸ್ಥೆಯು ಬಡ ಮತ್ತು ಅನಾಥ ಮಕ್ಕಳಿಗೆ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣವನ್ನು ಉಚಿತವಾಗಿ ನೀಡುತ್ತಿದ್ದು, ಇಲ್ಲಿ ದಾಖಲಾದ ಮಕ್ಕಳಿಗೆ ಊಟ , ವಸತಿ ಎಲ್ಲವನ್ನೂ ಉಚಿತವಾಗಿ ನೀಡಲಾಗುತ್ತಿದೆ. ಧಾರ್ಮಿಕ ಶಿಕ್ಷಣವನ್ನು ಅಲ್ಲೇ ವ್ಯಾಸಂಗ ಮಾಡುತ್ತಿರುವ ಸಾಲಿಂ ಕುಂಬ್ರದ ಸರಕಾರಿ ಪ್ರೌಢ ಶಾಲೆಯ ಎಂಟನೆ ತರಗತಿಯಲ್ಲಿ ಕಲಿಯುತ್ತಿದ್ದಾನೆ.

ಕಲಿಕೆಯಲ್ಲಿ ಉತ್ಸಾಹಿಯಾಗಿದ್ದ ಸಾಲಿಂ ಧಾರ್ಮಿಕ ಕಲಿಕೆಯಲ್ಲಿ ಮುಂದಿದ್ದು, ಶಾಲೆಯಲ್ಲಿಯೂ ಉತ್ತಮ ಕಲಿಕಾ ವಿದ್ಯಾರ್ಥಿಯಾಗಿ ಹೆಸರು ಪಡೆದುಕೊಂಡಿದ್ದ. ತನಗೆ ಕುರ್‌ಆನ್ ಕಂಠ ಪಾಠ ಮಾಡಬೇಕೆಂಬ ಹಂಬಲವನ್ನು ತನ್ನ ಗುರುಗಳ ಬಳಿ ಹೇಳಿಕೊಂಡಿದ್ದ. ಇವನ ಉತ್ಸಾಹವನ್ನು ಕಂಡು ಧಾರ್ಮಿಕ ಗುರುಗಳಾದ ಹಾಫಿಲ್ ಇನಾಯತುಲ್ಲಾ ಬಿಹಾರಿ ಅವರು ಆತನ ಕಲಿಕೆಗೆ ಪ್ರೋತ್ಸಾಹ ನೀಡಿದ್ದಾರೆ. ಇದರ ಭಾಗವಾಗಿ 114 ಅಧ್ಯಾಯವನ್ನೊಳಗೊಂಡ ಪವಿತ್ರ ಕುರ್‌ಆನ್ ಗ್ರಂಥವನ್ನು ಕಂಠಪಾಠ ಮಾಡಿಕೊಳ್ಳುವ ಮೂಲಕ ಗುರುಗಳನ್ನೇ ಬೆರಗಾಗುವಂತೆ ಮಾಡಿದ್ದಾನೆ. ಈತನ ಜೊತೆಗೆ ಕಂಠಪಾಠ ಕಲಿಯುತ್ತಿರುವ ಇತರ ವಿದ್ಯಾರ್ಥಿಗಳಿಗೆ ಇನ್ನೂ ಎರಡು ವರ್ಷಗಳ ಕಾಲ ತರಬೇತಿ ನೀಡಬೇಕಾಗುತ್ತದೆ. 6 ತಿಂಗಳಲ್ಲೇ ಕುರ್‌ಆನ್ ಕಂಠ ಪಾಠ ಮಾಡುವ ಮೂಲಕ ಸಾಲಿಂ ತನ್ನ ಕಲಿಕಾ ಸಾಮರ್ಥ್ಯವನ್ನು ತೋರಿಸಿದ್ದಾನೆ.

ಕುರ್‌ಆನ್ ಕಂಠ ಪಾಠ ಮಾಡುವುದು ಅಷ್ಟೊಂದು ಸುಲಭದ ಕೆಲಸವಲ್ಲ, ಇದಕ್ಕೆ ಕಠಿಣ ತರಬೇತಿಯೂ ಅಗತ್ಯವಿದೆ. ಕರ್ನಾಟಕ ಹಾಗೂ ಕೇರಳ ಸೇರಿದಂತೆ ದೇಶಾದ್ಯಂತ ನೂರಾರು ಕುರ್‌ಆನ್ ಕಂಠಪಾಠ ಕೇಂದ್ರಗಳಿವೆ. ಪೂರ್ತಿಯಾಗಿ ಕುರ್‌ಆನ್ ಕಂಠ ಪಾಠ ಮಾಡಿದರೆ ಆತನಿಗೆ ಹಾಫಿಝ್ ಎಂಬ ಬಿರುದನ್ನು ನೀಡಲಾಗುತ್ತದೆ. ಇದೀಗ ತನ್ನ 14 ವರ್ಷ ಪ್ರಾಯದಲ್ಲೇ ಸಾಲಿಂ ಹಾಫಿಝ್ ಬಿರುದು ಪಡೆಯಲಿದ್ದಾನೆ.

6 ತಿಂಗಳಲ್ಲೇ ಓರ್ವ ಬಾಲಕ ಕುರ್‌ಆನ್ ಕಂಠ ಪಾಠ ಮಾಡಿರುವುದು ನಮ್ಮ ಸಂಸ್ಥೆಗೆ ಹೆಮ್ಮೆಯ ವಿಚಾರ. ಬಡತನದಿಂದ ಕೂಡಿರುವ ಕುಟುಂಬದ ಮಗುವೊಂದು ಹಾಫಿಝ್ ಆಗಿರುವುದು ಉತ್ತಮ ವಿಚಾರವಾಗಿದೆ. ಶಾಲೆಯ ಶಿಕ್ಷಣದ ಜೊತೆಗೆ ಧಾರ್ಮಿಕ ಶಿಕ್ಷಣವನ್ನು ಕಲಿಯುವುದು ಅಷ್ಟೊಂದು ಸುಲಭದ ಕೆಲಸವಲ್ಲ, ಇದಕ್ಕೆ ಆತನ ನಿರಂತರ ಪರಿಶ್ರಮವೇ ಕಾರಣವಾಗಿದೆ. ಇದಕ್ಕಾಗಿ ನಾವು ಆತನಿಗೆ ಅಭಿನಂದನೆಯನ್ನು ಸಲ್ಲಿಸುತ್ತೇವೆ.

ಕೆ ಆರ್ ಹುಸೈನ್ ದಾರಿಮಿ ರೆಂಜಲಾಡಿ, ಕೆಐಸಿ ವ್ಯವಸ್ಥಾಪಕರು

ಸಾಲಿಂ ಶಾಲೆಯಲ್ಲೂ ಕಲಿಕೆಯಲ್ಲಿ ಮುಂದಿದ್ದಾನೆ, ಅಂದಿನ ಪಾಠವನ್ನು ಅಂದೇ ಓದುವ ಮೂಲಕ ಶಿಕ್ಷಕರಿಗೂ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿದ್ದಾನೆ. ಏಳನೇ ತರಗತಿಯಲ್ಲೂ ಈತನಿಗೆ ಉತ್ತಮ ಅಂಕವಿದೆ. ಶಾಲೆಯ ಎಲ್ಲಾ ಚಟಿವಟಿಕೆಗಳಲ್ಲೂ ಭಾಗಿಯಾಗುತ್ತಿದ್ದಾನೆ. ಈತನ ಸಾಧನೆಯನ್ನು ನಾವು ಅಭಿನಂದಿಸುತ್ತೇವೆ.

ಸಂಧ್ಯಾ, ಸಾಲಿಂ ತರಗತಿ ಶಿಕ್ಷಕಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News