ಶಿವಾಜಿ ಜಯಂತಿ, ಸರ್ವಜ್ಞ ಜಯಂತಿ ಆಚರಣೆಗೆ ಪೂರ್ವಭಾವಿ ಸಭೆ
ಉಡುಪಿ, ಫೆ.13: ಜಿಲ್ಲೆಯಲ್ಲಿ ಶಿವಾಜಿ ಜಯಂತಿ ಹಾಗೂ ಸರ್ವಜ್ಞ ಜಯಂತಿ ಆಚರಣೆ ಕುರಿತು ಅಪರ ಜಿಲ್ಲಾಧಿಕಾರಿ ಅನುರಾಧ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಪೂರ್ವಭಾವಿ ಸಭೆ ನಡೆಯಿತು.
ಫೆ.19ರಂದು ಶಿವಾಜಿ ಜಯಂತಿಯನ್ನು ನಿಟ್ಟೂರು ಬಾಲಕಿಯರ ಮಂದಿರ ದಲ್ಲಿ ಏರ್ಪಡಿಸುವಂತೆ ಸೂಚಿಸಿದ ಅಪರ ಜಿಲ್ಲಾಧಿಕಾರಿಗಳು, ಶಿವಾಜಿ ಕುರಿತು ಯಕ್ಷಗಾನ ಪ್ರದರ್ಶನ ಹಾಗೂ ವಿಶೇಷ ಉಪನ್ಯಾಸ ಏರ್ಪಡಿಸುವಂತೆ ತಿಳಿಸಿದರು.
ಫೆ.20ರಂದು ಉಡುಪಿ ವಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಸರ್ವಜ್ಞ ಜಯಂತಿ ಆಚರಿಸುವಂತೆ ತಿಳಿಸಿದ ಅಪರ ಜಿಲ್ಲಾಧಿಕಾರಿ, ಸರ್ವಜ್ಞನ ಕುರಿತು ಉಪನ್ಯಾಸ ಕಾರ್ಯಕ್ರಮ, ವಚನ ಗಾಯನ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳಿಗೆ ಪ್ರಬಂದ ಸ್ಪರ್ಧೆಯನ್ನು ಏರ್ಪಡಿಸುವಂತೆ ಸೂಚಿಸಿದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಕುಮಾರ್, ಪೌರಾಯುಕ್ತ ಮಂಜುನಾಥಯ್ಯ, ಜಿಲ್ಲಾ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್‌ನ ಅಧ್ಯಕ್ಷ ಕೇಶವರಾವ್ ಮತ್ತಿತರರು ಉಪಸ್ಥಿತರಿದ್ದರು.