ಸಿನೆಮಾದ ನಡುವೆ ರಾಷ್ಟ್ರಗೀತೆ: ಸುಪ್ರೀಂ ಕೋರ್ಟ್ ಸ್ಪಷ್ಟನೆ
Update: 2017-02-14 13:51 IST
ಹೊಸದಿಲ್ಲಿ, ಫೆ.14: ಸಿನೆಮಾ ಅಥವಾ ಸಾಕ್ಷ್ಯಚಿತ್ರದ ಭಾಗವಾಗಿ ರಾಷ್ಟ್ರಗೀತೆ ನುಡಿಸುತ್ತಿರುವ ಸಂದರ್ಭ ಚಿತ್ರಮಂದಿರಗಳಲ್ಲಿರುವ ವೀಕ್ಷಕರು ಎದ್ದು ನಿಲ್ಲಬೇಕಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟ ಪಡಿಸಿದೆ. ನವೆಂಬರ್ 30, 2016ರಲ್ಲಿ ಸುಪ್ರೀಂ ಕೋರ್ಟ್ ತನ್ನ ಆದೇಶವೊಂದರಲ್ಲಿ ಎಲ್ಲಾ ಚಿತ್ರಮಂದಿರಗಳು ಚಿತ್ರ ಆರಂಭವಾಗುವ ಮುನ್ನ ಕಡ್ಡಾಯವಾಗಿ ರಾಷ್ಟ್ರಗೀತೆ ನುಡಿಸಬೇಕೆಂದು ಆದೇಶ ನೀಡಿತ್ತು.
ಆದರೆ ಹೀಗೆ ರಾಷ್ಟ್ರಗೀತೆ ನುಡಿಸುವಾಗ ಕೆಲವರು ನಿಲ್ಲದೇ ಹೋದಲ್ಲಿ ಅವರ ಮೇಲೆ ಹಲ್ಲೆಗೈಯ್ಯುವ ಸಂಪ್ರದಾಯವೊಂದನ್ನು ಕೆಲ ಹಿಂದೂ ಸಂಘಟನೆಗಳು ಹುಟ್ಟು ಹಾಕಿ ಹಲವು ಬಾರಿ ಉದ್ವಿಗ್ನತೆಗೆ ಕಾರಣವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ರಾಷ್ಟ್ರಗೀತೆ ನುಡಿಸುವ ಸಂದರ್ಭ ನಿಲ್ಲದವರಿಗೆ ರಾಷ್ಟ್ರಭಕ್ತಿ ಇಲ್ಲವೆಂಬಂತಹ ಭಾವನೆ ಬಿಂಬಿಸಲೂ ಇದು ಕಾರಣವಾಗಿತ್ತು.