×
Ad

ಚುನಾವಣಾ ಸಮೀಕ್ಷೆ ವರದಿ ಪ್ರಕಟಿಸಿದ ದೈನಿಕ್ ಜಾಗರಣ್ ಆನ್ ಲೈನ್ ಸಂಪಾದಕ ಬಂಧನ

Update: 2017-02-14 15:34 IST

ಹೊಸದಿಲ್ಲಿ, ಫೆ.14: ಉತ್ತರ ಪ್ರದೇಶ ವಿಧಾನಸಭೆಗೆ ಮೊದಲ ಹಂತದ ಚುನಾವಣೆ ನಡೆದ ನಂತರ ಬಿಜೆಪಿ ಪರವಾಗಿದ್ದ ಮತಗಟ್ಟೆ ಸಮೀಕ್ಷಾ ವರದಿಯೊಂದನ್ನು ಪ್ರಕಟಿಸಿದ್ದಕ್ಕಾಗಿ ದೈನಿಕ್ ಜಾಗರಣ್ ಇದರ ಆನ್ ಲೈನ್ ಸಂಪಾದಕ ಶೇಖರ್ ತ್ರಿಪಾಠಿಯವರನ್ನು ಉತ್ತರ ಪ್ರದೇಶ ಪೊಲೀಸರು ಸೋಮವಾರ ತಡರಾತ್ರಿ ಬಂಧಿಸಿದ್ದಾರೆ.

ರಿಸೋರ್ಸ್ ಡೆವಲೆಪ್ಮೆಂಟ್ ಇಂಟರ್ ನ್ಯಾಶನಲ್‌ಪ್ರೈವೇಟ್ ಲಿಮಿಟೆಡ್ ( ಆರ್ ಡಿ ಐ) ಎಂಬ ಕಂಪೆನಿ ನಡೆಸಿದ ಸಮೀಕ್ಷೆಯ ವರದಿಯನ್ನು ಜಾಗರಣ್ ನ ಆಂಗ್ಲ ವೆಬ್ ಸೈಟಿನಲ್ಲಿ ಪ್ರಕಟಿಸಲಾಗಿತ್ತು. ಚುನಾವಣಾ ಅವಧಿಯಲ್ಲಿಯಾವುದೇಮತಗಟ್ಟೆ ಸಮೀಕ್ಷಾ ವರದಿ ಯಾ ಮತದಾರರ ಅಭಿಪ್ರಾಯಗಳನ್ನೊಳಗೊಂಡ ಸುದ್ದಿ ಪ್ರಕಟಿಸದಂತೆ ಸುದ್ದಿ ಸಂಸ್ಥೆಗಳಿಗೆ ಜಾರಿಗೊಳಿಸಲಾದ ನಿಯಮಾವಳಿಯನ್ನುದೈನಿಕ್ ಜಾಗರಣ್ ಉಲ್ಲಂಘಿಸಿದೆ ಎಂದು ಚುನಾವಣಾ ಆಯೊಗ ತಿಳಿಸಿದೆ.
ಜಾಗರಣ್ ನ್ಯೂ ಮೀಡಿಯಾ ಇದರ ಸಿಇಒ ಸುಕೃತಿ ಗುಪ್ತಾ, ಜಾಗರಣ್ ಇಂಗ್ಲಿಷ್ ಆನ್ ಲೈನ್ ಇದರ ಸಹಾಯಕ ಸಂಪಾದಕ ವರುಣ್ ಶರ್ಮ ಹಾಗೂ ಡಿಜಿಟಲ್ ಮುಖ್ಯಸ್ಥೆ ಪೂಜಾ ಸೇಠಿ ಅವರ ನಿವಾಸಗಳ ಮೇಲೂ ಪೊಲೀಸರು ದಾಳಿ ನಡೆಸಿದ್ದಾರೆ.

ಆರ್ ಡಿ ಐ ಹಾಗೂ ದೈನಿಕ ಜಾಗರಣ್ ಆಡಳಿತ ಹಾಗೂ ಸುದ್ದಿ ಸಂಸ್ಥೆಯ ಮುಖ್ಯ ಸಂಪಾದಕರ ವಿರುದ್ಧ ಫೆಬ್ರವರಿ 11ರಂದು ಚುನಾವಣೆ ನಡೆದ ಎಲ್ಲಾ ಜಿಲ್ಲೆಗಳ ಹಾಗೂ ಲಕ್ನೌ ಇಲ್ಲಿನ ಜಿಲ್ಲಾ ಚುನಾವಣಾ ಅಧಿಕಾರಿಗಳು ಐಪಿಸಿಯ ಸೆಕ್ಷನ್ 188 ಹಾಗೂ ಜನ ಪ್ರಾತಿನಿಧ್ಯ ಕಾಯ್ದೆ ಸೆಕ್ಷನ್ 126 ಎ ಹಾಗೂ 126 ಬಿ ಅನ್ವಯ ಪ್ರಕರಣ ದಾಖಲಿಸಬೇಕೆಂದು ಸೋಮವಾರ ಚುನಾವಣಾ ಆಯೋಗ ಆದೇಶಿಸಿತ್ತು.

ಈ ಸೆಕ್ಷನ್ ಗಳನ್ವಯ ಶಿಕ್ಷೆಯಾದಲ್ಲಿ ಎರಡು ವರ್ಷಗಳ ತನಕ ಜೈಲು ಅಥವಾ ದಂಡ ವಿಧಿಸಲಾಗುತ್ತದೆ ಇಲ್ಲವೇ ಎರಡೂ ಶಿಕ್ಷೆಗಳನ್ನು ಅನುಭವಿಸಬೇಕಾಗಿದೆ.
ಆದರೆ ದೈನಿಕ್ ಜಾಗರಣ್ ಮಾತ್ರ ಮತಗಟ್ಟೆ ಸಮೀಕ್ಷಾ ವರದಿಯು ಪ್ರಮಾದವಶಾತ್ ಪ್ರಕಟಗೊಂಡಿದ್ದು ಅದನ್ನು ಕೂಡಲೇ ತೆಗೆದು ಹಾಕಲಾಗಿದೆ ಎಂದು ಹೇಳಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News