ತಲಪಾಡಿ ಟೋಲ್‌ಗೇಟ್‌ನಲ್ಲಿ ವಾಹನಿಗರ ಸುಲಿಗೆ: ಆರೋಪ
ಮಂಗಳೂರು, ಫೆ.14: ಭಾರೀ ಪ್ರತಿರೋಧದ ಹಿನ್ನೆಲೆಯಲ್ಲಿ ಸುದ್ದಿಯಾಗಿರುವ ಕರ್ನಾಟಕ-ಕೇರಳ ಗಡಿಭಾಗದ ತಲಪಾಡಿಯಲ್ಲಿ ತೆರೆಯಲಾದ ‘ಟೋಲ್‌ಗೇಟ್’ನಲ್ಲಿ ವಾಹನಿಗರನ್ನು ಸುಲಿಗೆ ಮಾಡಲಾಗುತ್ತಿದೆ. ಸುಲಿಗೆಗೈದ ಟೋಲ್ ಸಿಬ್ಬಂದಿಯನ್ನು ವಿಚಾರಣೆಗೊಳಪಡಿಸುವ ಬದಲು ‘ನೀವು ಯಾರಿಗೆ ಬೇಕಾದರೂ ದೂರು ನೀಡಿ. ನಮಗೇನೂ ಇಲ್ಲ’ ಎಂದು ಟೋಲ್‌ಗೇಟ್ ಮ್ಯಾನೇಜರ್ ಉಡಾಫೆಯಿಂದ ಉತ್ತರಿಸಿ ದರ್ಪ ಪ್ರದರ್ಶಿಸಿದ್ದಾರೆ ಎಂದು ನಗರ ಬೊಕ್ಕಪಟ್ಣದ ಝೈನುಲ್ ಆಬಿದೀನ್ ಎಂಬವರು ಆರೋಪಿಸಿದ್ದಾರೆ.
ತನ್ನ ಕುಟುಂಬ ಸಮೇತ ಕೇರಳಕ್ಕೆ ತೆರಳಿದ್ದ ಝೈನುಲ್ ಆಬಿದೀನ್ ಮಂಗಳವಾರ ಮಧ್ಯಾಹ್ನ ಸುಮಾರು 1:20ರ ವೇಳೆಗೆ ತಲಪಾಡಿ ಗೇಟ್‌ನಲ್ಲಿ 35 ರೂ. ಟೋಲ್ ನೀಡಿದ್ದಾರೆ. ಸ್ವಲ್ಪ ದೂರ ಬಂದ ಬಳಿಕ ತನಗೆ ನೀಡಿದ ಟಿಕೆಟ್ ತನ್ನದಲ್ಲ ಎಂಬುದು ಝೈನುಲ್ ಆಬಿದೀನ್‌ಗೆ ಮನವರಿಕೆಯಾಯಿತು. ತಕ್ಷಣ ಹಿಂದಿರುಗಿ ಪ್ರಶ್ನಿಸಿದಾಗ ಟೋಲ್ ಸಿಬ್ಬಂದಿ ಕ್ಷಮೆಯಾಚಿಸಿದ್ದಾನೆ. ಆದರೆ ವ್ಯವಸ್ಥಾಪಕರ ಬಳಿ ದೂರು ನೀಡಲು ಮುಂದಾದಾಗ ಅದಕ್ಕೆ ಸೂಕ್ತ ಸ್ಪಂದನೆ ಸಿಗಲಿಲ್ಲ. ಟೋಲ್‌ಗೇಟ್ ಮೇಲ್ವಿಚಾರಕನನ್ನು ಮಾತನಾಡಲು ಕಳುಹಿಸಿ ಸುಮ್ಮನಾಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಝೈನುಲ್ ಆಬಿದೀನ್ ‘ಇಂದು ಬೆಳಗ್ಗೆ 8:37ಕ್ಕೆ ಕೇರಳಕ್ಕೆ ತೆರಳಿದ ವಾಹನಿಗರು 35 ರೂ. ಪಾವತಿಸಿದರೂ ಟಿಕೆಟ್ ಪಡೆದುಕೊಂಡಿರಲಿಲ್ಲ. ಅದೇ ಟಿಕೆಟನ್ನು ನನಗೆ ನೀಡಿದರು. ನಾನು ಕೂಡ ಮೊದಲು ಗಮನಿಸಲಿಲ್ಲ. ಸ್ವಲ್ಪ ದೂರ ಕ್ರಮಿಸಿದ ಬಳಿಕ ಹೊಸ ಟೋಲ್‌ಗೇಟ್ ಆದ ಕಾರಣ ಟಿಕೆಟ್ ಪರಿಶೀಲಿಸಿದೆ. ಅದರಲ್ಲಿ ಸಮಯ 8:37 ಎಂದಿದೆ. ವಾಹನದ ಸಂಖ್ಯೆ ಕೆಎಲ್ 14 ಎಂ 5820 ಎಂದಿದೆ. ತಕ್ಷಣ ನಾನು ಹಿಂದಿರುಗಿ ಸಿಬ್ಬಂದಿಯನ್ನು ವಿಚಾರಿಸಿದಾಗ ಆತ ಕ್ಷಮೆಯಾಚಿಸಿದ. ಆದರೆ, ಅಲ್ಲಿನ ಮ್ಯಾನೇಜರ್ ವಿಷಯ ತಿಳಿದುಕೊಳ್ಳಲು ಆಸಕ್ತಿ ವಹಿಸದೆ ಮೇಲ್ವಿಚಾರಕನಲ್ಲಿ ಮಾತನಾಡಲು ಸೂಚಿಸಿದರು. ಆತ ಸಿಬ್ಬಂದಿಯ ಸಂಬಳದಿಂದ 35 ರೂ. ಕಡಿತ ಮಾಡುವುದಾಗಿ ತಿಳಿಸಿದರು. ಇಲ್ಲಿ 35 ರೂ.ನ ಪ್ರಶ್ನೆಯಲ್ಲ. ಅನ್ಯಾಯ, ಅಕ್ರಮ, ಹಗಲು ದರೋಡೆಯ ಪ್ರಶ್ನೆಯಾಗಿದೆ. ಹಾಗಾಗಿ ಇದನ್ನು ಸಕಾಲದಲ್ಲಿ ಪ್ರಶ್ನಿಸದೆ ಮತ್ತು ಆರಂಭದಲ್ಲೇ ಕಡಿವಾಣ ಹಾಕದಿದ್ದರೆ ಭವಿಷ್ಯದ ದಿನಗಳಲ್ಲಿ ಟೋಲ್‌ಗೇಟ್ ಸಂಕಷ್ಟ ತಂದೊಡ್ಡಲಿದೆ. ಅಲ್ಲದೆ ಟೋಲ್‌ಗೇಟ್ ದಾಟಿ ಹೋಗುವ ಪ್ರತಿಯೊಬ್ಬ ವಾಹನಿಗರು ಟಿಕೆಟ್ ಪರಿಶೀಲಿಸಬೇಕು. ಇಲ್ಲದಿದ್ದರೆ ಇವರನ್ನು ಹದ್ದುಬಸ್ತಿನಲ್ಲಿಡಲು ಕಷ್ಟವಾದೀತು’ ಎಂದು ಅಭಿಪ್ರಾಯಪಟ್ಟಿದ್ದಾರೆ.