ಮಾವಳ್ಳಿ-2 ಗ್ರಾಪಂ ವಿರುದ್ಧ ಮಾಡಿರುವ ಆರೋಪ ಆಧಾರ ರಹಿತವಾಗಿದೆ : ಪ್ರಭಾರ ಅಧ್ಯಕ್ಷೆ ನಾಗರತ್ನಾ
ಭಟ್ಕಳ,ಫೆ.14: ತಾಲೂಕಿನ ಮಾವಳ್ಳಿ-2 ಗ್ರಾ. ಪಂ.ಅಧ್ಯಕ್ಷ ಹುದ್ದೆಗೆ ಸಂಬಂಧಿಸಿದಂತೆ ಭಟ್ಕಳ ನಾಗರಿಕ ವೇದಿಕೆ ಮಾಡಿರುವ ಆರೋಪಗಳು ಆಧಾರರಹಿತವಾಗಿದ್ದು ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ಪ್ರಭಾರಿ ಅಧ್ಯಕ್ಷೆ ನಾಗರತ್ನಾ ಪಡಿಯಾರ ಪ್ರತಿಕ್ರಿಯಿಸಿದ್ದಾರೆ.
ಅವರು ಮುರುಡೇಶ್ವರದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಇತ್ತಿಚೆಗೆ ಭಟ್ಕಳದ ನಾಗರೀಕ ವೇದಿಕೆ ಸದಸ್ಯರು ಮಾಡಿದ ಆರೋಪಗಳಿಗೆ ಉತ್ತರವಾಗಿ ಸ್ಪಷ್ಟೀಕರಣ ನೀಡುತ್ತ ಮಾತನಾಡಿದರು.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಧಾ ಮೊಗೇರ ಅಧ್ಯಕ್ಷ ಹುದ್ದೆಗೆ ನೀಡಿರುವ ರಾಜಿನಾಮೆ ಅಂಗೀಕಾರವಾಗಿದ್ದು, ನಂತರ ಅಧ್ಯಕ್ಷರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಮೀಸಲಾತಿಯ ಕಾರಣ ಯಾರೂ ನಾಮಪತ್ರ ಸಲ್ಲಿಸದೇ ಇರುವುದರಿಂದ ಹುದ್ದೆ ಖಾಲಿ ಇದೆ. ಭಟ್ಕಳ ಸಹಾಯಕ ಕಮಿಷನರ್ ಆದೇಶದ ಪ್ರಕಾರ ಉಪಾಧ್ಯಕ್ಷ ಸ್ಥಾನದಲ್ಲಿರುವ ನಾನು ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಅಧ್ಯಕ್ಷರಾಗಿದ್ದ ಸುಧಾ ಮೊಗೇರರವರು ಸದಸ್ಯತ್ವ ಸ್ಥಾನಕ್ಕೆ ನೀಡಿದ ರಾಜಿನಾಮೆ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ನಿಯಮದಂತೆ ಅವರು ಅಧ್ಯಕ್ಷರಿಗೆ ರಾಜಿನಾಮೆ ಸಲ್ಲಿಸಬೇಕಾಗಿದ್ದು, ಫೆ.10ರಂದು ಅವರು ರಜಿಸ್ಟರ್ಡ ಪೋಸ್ಟ್ ಮೂಲಕ ಸಲ್ಲಿಸಿರುವ ರಾಜಿನಾಮೆ ಪತ್ರ ನಮಗೆ ತಲುಪಿದೆ.
ಆದರೆ ಅವರು ರಾಜಿನಾಮೆಯನ್ನು ಸಲ್ಲಿಸಬೇಕಾಗಿದ್ದಲ್ಲಿ ಅಧ್ಯಕ್ಷರ ಮುಂದೆ ಹಾಜರಾಗಿ ಲಿಖಿತವಾಗಿ ನೀಡಬೇಕು. ಈ ಕುರಿತಂತೆ ಪಂಚಾಯತ ವತಿಯಿಂದ ನೋಟಿಸ್ ನೀಡಿದ್ದೇವೆ. ಈ ಬಗ್ಗೆ ಯಾವುದೇ ಮಾಹಿತಿಯನ್ನು ಹೊಂದಿರದ ನಾಗರಿಕ ವೇದಿಕೆಯ ಪದಾಧಿಕಾರಿಗಳು ಕಪೋಲಕಲ್ಪಿತವಾಗಿ ಪತ್ರಿಕೆಗಳಿಗೆ ಹೇಳಿಕೆ ನೀಡಿದ್ದಾರೆ. ಪಂಚಾಯತ ಕರವಸೂಲಿಯ ಬಗ್ಗೆಯೂ ನಾಗರಿಕ ವೇದಿಕೆಯ ಹೇಳಿಕೆ ಸುಳ್ಳಿನಿಂದ ಕೂಡಿದೆ. ಕರ ವಸೂಲಾತಿಯಲ್ಲಿ ಪಂಚಾಯತ 100% ಪ್ರಗತಿಯನ್ನು ಸಾಧಿಸುತ್ತ ಬಂದಿದೆ. ಈ ಸಾಲಿನಲ್ಲಿಯೂ 70% ಕರ ವಸೂಲಿಯಾಗಿದ್ದು, ಇನ್ನುಳಿದ ಒಂದೂವರೆ ತಿಂಗಳಿನಲ್ಲಿ 100% ಗುರಿಯನ್ನು ಸಾಧಿಸುತ್ತೇವೆ. ಮಾವಳ್ಳಿ-2 ಹೊಸದಾಗಿ ಅಸ್ವಿತ್ಮಕ್ಕೆ ಬಂದ ಪಂಚಾಯತ ಆಗಿದ್ದು, ಮೊದಲ ವರ್ಷ ಯಾವುದೇ ಅನುದಾನ ಸಿಕ್ಕಿಲ್ಲ. ಆದರೆ ಕರ ವಸೂಲಿಯಿಂದಾಗಿ ರು17 ಲಕ್ಷದಷ್ಟು ಹಣವನ್ನು ಸಂಗ್ರಹಿಸುವುದರ ಮೂಲಕ ನಿಧಿ-2ರ ಕ್ರೀಯಾಯೋಜನೆಯನ್ನು ತಯಾರಿಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇವೆ.
ಈ ರೀತಿ ನಿಧಿ-2ರ ಬಳಕೆಯಲ್ಲಿ ಉನ್ನತ ಸ್ಥಾನದಲ್ಲಿರುವ ಕೆಲವೇ ಪಂಚಾಯತಗಳಲ್ಲಿ ಮಾವಳ್ಳಿ-2 ಪಂಚಾಯತ ಒಂದಾಗಿದೆ ಎಂಬುದನ್ನು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ. ಶಾಸಕರ ಸಹಾಯದೊಂದಿಗೆ ಪಂಚಾಯತ ವ್ಯಾಪ್ತಿಯ ಪ್ರತಿಯೊಂದು ವಾರ್ಡುಗಳ ಕಡುಬಡವರಿಗೆ ಮನೆಗಳನ್ನು ಒದಗಿಸಿದ್ದೇವೆ. ಅಭಿವೃದ್ಧಿ ಕಾರ್ಯಗಳಲ್ಲಿಯೂ ಯಾವುದೇ ವಾರ್ಡಿಗೆ ಅನ್ಯಾಯವಾಗದಂತೆ ನೋಡಿಕೊಂಡಿದ್ದೇವೆ. ಪಂಚಾಯತ ಆಡಳಿತದಲ್ಲಿ ನನಗೆ ಅನುಭವ ಇದೆ. ಅಖಂಡ ಮಾವಳ್ಳಿ ಪಂಚಾಯತ ಅಧ್ಯಕ್ಷೆಯಾಗಿ ಈ ಹಿಂದೆ ನಾನು ಕೆಲಸ ಮಾಡಿದ್ದೇನೆ. ಕಾರ್ಮಿಕ ಸಂಘಟನೆಯಲ್ಲಿ ಜಿಲ್ಲಾ ಪದಾಧಿಕಾರಿಯಾಗಿ ಹೋರಾಟದಲ್ಲಿ ಪಾಲ್ಗೊಂಡಿದ್ದೇನೆ. ನಾಗರಿಕ ವೇದಿಕೆ ಕಾನೂನಿನ ಅರಿವು ಇಲ್ಲದೇ ವೃಥಾ ಆರೋಪ ಮಾಡಿರುವುದು ಬೇಸರದ ಸಂಗತಿಯಾಗಿದೆ ಎಂದು ವಿವರಿಸಿದರು. ಎಪಿಎಮ್‌ಸಿ ಅಧ್ಯಕ್ಷ ಗೋಪಾಲ ನಾಯ್ಕ, ವಾಲ್ಮೀಕಿ ಪಪಂ ಅಭಿವೃದ್ಧಿ ನಿಗಮದ ನಿರ್ದೇಶಕ ವೆಂಕಟೇಶ ಗೊಂಡ, ಮೋಹನ್ ನಾಯ್ಕ, ಪವನ್‌ಕುಮಾರ್, ರಾಜು, ಲಕ್ಷ್ಮಣ ನಾಯ್ಕ, ಸಂತೋಷ, ಗೋವಿಂದ ಗೊಂಡ, ಸುನಿಲ್ ನಾಯ್ಕ ಉಪಸ್ಥಿತರಿದ್ದರು.