×
Ad

ಆಸ್ಟ್ರೇಲಿಯ ವಿರುದ್ಧ ಟೆಸ್ಟ್ ಸರಣಿ: ಮೊದಲೆರಡು ಪಂದ್ಯಕ್ಕೆ ಭಾರತ ತಂಡ ಪ್ರಕಟ

Update: 2017-02-14 17:45 IST

ಹೊಸದಿಲ್ಲಿ, ಫೆ.14: ಮುಂಬರುವ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಿಗೆ ಬಾಂಗ್ಲಾದೇಶ ವಿರುದ್ಧ ಏಕೈಕ ಟೆಸ್ಟ್ ಪಂದ್ಯಕ್ಕೆ ಆಯ್ಕೆ ಮಾಡಲಾಗಿರುವ 14 ಸದಸ್ಯರ ತಂಡವನ್ನೇ ಉಳಿಸಿಕೊಳ್ಳಲಾಗಿದೆ.

ಫೆ.23 ರಿಂದ ಪುಣೆಯಲ್ಲಿ ಆರಂಭವಾಗಲಿರುವ ಆಸ್ಟ್ರೇಲಿಯ ವಿರುದ್ಧ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಿಗೆ ವೇಗದ ಬೌಲರ್ ಮುಹಮ್ಮದ್ ಶಮಿ ಆಯ್ಕೆಯಾಗಿಲ್ಲ. ನವೆಂಬರ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಮೂರನೆ ಟೆಸ್ಟ್ ಪಂದ್ಯದ ವೇಳೆ ಮಂಡಿನೋವಿಗೆ ಒಳಗಾಗಿದ್ದ ಶಮಿ ಆಯ್ಕೆಗಾರರ ಮನ ಗೆಲ್ಲಲು ವಿಫಲವಾದ ಕಾರಣ ಅವಕಾಶ ವಂಚಿತರಾಗಿದ್ದಾರೆ.

ನ್ಯೂಝಿಲೆಂಡ್ ವಿರುದ್ಧದ ಏಕದಿನ ಸರಣಿಯ ವೇಳೆ ಗಾಯಗೊಂಡಿರುವ ರೋಹಿತ್ ಶರ್ಮ ಕೂಡ ತಂಡಕ್ಕೆ ವಾಪಸಾಗಿಲ್ಲ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಬ್ಯಾಟ್ಸ್‌ಮನ್ ಕರುಣ್ ನಾಯರ್ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ. ತಮಿಳುನಾಡಿನ ಅಭಿನವ್ ಮುಕುಂದ್ ಮೀಸಲು(3ನೆ) ಆರಂಭಿಕ ಆಟಗಾರನಾಗಿ ತಂಡದಲ್ಲಿದ್ದಾರೆ.

ಐಸಿಸಿ ಟೆಸ್ಟ್ ಬೌಲರ್‌ಗಳ ರ್ಯಾಂಕಿಂಗ್‌ನಲ್ಲಿ ಅಗ್ರ-2 ಸ್ಥಾನದಲ್ಲಿರುವ ಆರ್.ಅಶ್ವಿನ್ ಹಾಗೂ ರವೀಂದ್ರ ಜಡೇಜರೊಂದಿಗೆ ಎಡಗೈ ಸ್ಪಿನ್ನರ್ ಕುಲ್‌ದೀಪ್ ಯಾದವ್ ಹಾಗೂ ಆಫ್-ಸ್ಪಿನ್ನರ್ ಜಯಂತ್ ಯಾದವ್ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಬಾಂಗ್ಲಾ ವಿರುದ್ಧದ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ಅಮಿತ್ ಮಿಶ್ರಾರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ.

ಈ ವರ್ಷದ ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ವಿಶ್ವದ ನಂ.1 ತಂಡ ಭಾರತ ಹಾಗೂ ನಂ.2ನೆ ತಂಡ ಆಸ್ಟ್ರೇಲಿಯ ತಂಡಗಳು ಸೆಣಸಾಡಲಿವೆ. ಆಸ್ಟ್ರೇಲಿಯ 2013-14ರಲ್ಲಿ ಸ್ವದೇಶದಲ್ಲಿ 2-0 ಅಂತರದಿಂದ ಸರಣಿ ಗೆದ್ದುಕೊಂಡು ಟ್ರೋಫಿಯನ್ನು ತನ್ನದಾಗಿಸಿಕೊಂಡಿತ್ತು.

 ಭಾರತ 2015ರ ಆಗಸ್ಟ್‌ನ ಬಳಿಕ ಒಂದೂ ಟೆಸ್ಟ್ ಸರಣಿಯನ್ನು ಸೋತಿಲ್ಲ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಸತತ 19 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಸೋಮವಾರ ಬಾಂಗ್ಲಾದ ವಿರುದ್ಧ ಸತತ 6ನೆ ಟೆಸ್ಟ್ ಸರಣಿಯನ್ನು ಜಯಿಸಿ ಅಮೋಘ ಗೆಲುವಿನ ಸಾಧನೆ ಮಾಡಿದೆ. ಈ ಮೂಲಕ 2008-10ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಗೆದ್ದಂತಹ ಸತತ 5 ಟೆಸ್ಟ್ ಸರಣಿಯ ಸಾಧನೆಯನ್ನು ಉತ್ತಮಪಡಿಸಿಕೊಂಡಿದೆ.

  ಆಸ್ಟ್ರೇಲಿಯ ತಂಡ 2011ರ ಆಗಸ್ಟ್‌ನ ಬಳಿಕ ಏಷ್ಯಾದಲ್ಲಿ ಒಂದೂ ಟೆಸ್ಟ್ ಪಂದ್ಯವನ್ನು ಜಯಿಸಿಲ್ಲ. 2011ರ ಬಳಿಕ ಏಷ್ಯಾದಲ್ಲಿ 2 ಪಂದ್ಯಗಳನ್ನು ಡ್ರಾಗೊಳಿಸಿರುವ ಆಸೀಸ್ ಸತತ 9 ಪಂದ್ಯಗಳಲ್ಲಿ ಸೋತಿದೆ. ಇದರಲ್ಲಿ 2013ರಲ್ಲಿ ಭಾರತ ವಿರುದ್ಧದ 4-0 ಅಂತರದ ಸೋಲು ಕೂಡ ಸೇರಿದೆ. 2014ರಲ್ಲಿ ಯುಎಇಯಲ್ಲಿ ಪಾಕಿಸ್ತಾನ ವಿರುದ್ಧ 2-0 ಹಾಗೂ ಕಳೆದ ವರ್ಷ ಶ್ರೀಲಂಕಾದ ವಿರುದ್ಧ 3-0 ಅಂತರದಿಂದ ಆಸ್ಟ್ರೇಲಿಯ ಟೆಸ್ಟ್ ಸರಣಿ ಸೋತಿದೆ.

ಭಾರತ-ಆಸ್ಟ್ರೇಲಿಯ ನಡುವಿನ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯು ಪುಣೆ(ಫೆ.23-27), ಬೆಂಗಳೂರು(ಮಾ.4-8), ರಾಂಚಿ(ಮಾ.16-20) ಹಾಗೂ ಧರ್ಮಶಾಲಾ(ಮಾ.25-29)ದಲ್ಲಿ ನಡೆಯಲಿದೆ.

ಆಸ್ಟ್ರೇಲಿಯ ಹಾಗೂ ಭಾರತ ‘ಎ’ ತಂಡಗಳ ನಡುವೆ ದ್ವಿದಿನ ಅಭ್ಯಾಸ ಪಂದ್ಯ ಫೆ.16 ರಿಂದ ಮುಂಬೈನ ಬ್ರೆಬೋರ್ನ್ ಸ್ಟೇಡಿಯಂನಲ್ಲಿ ನಡೆಯುವುದು.

ಆಸ್ಟ್ರೇಲಿಯ ವಿರುದ್ಧ ಮೊದಲೆರಡು ಪಂದ್ಯಗಳಿಗೆ ಭಾರತ ಟೆಸ್ಟ್ ತಂಡ:

ವಿರಾಟ್ ಕೊಹ್ಲಿ(ನಾಯಕ), ಮುರಳಿ ವಿಜಯ್, ಕೆ.ಎಲ್. ರಾಹುಲ್, ಅಭಿನವ್ ಮುಕುಂದ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಕರುಣ್ ನಾಯರ್, ವೃದ್ಧಿಮಾನ್ ಸಹಾ(ವಿಕೆಟ್‌ಕೀಪರ್), ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ರವೀಂದ್ರ ಜಡೇಜ, ಜಯಂತ್ ಯಾದವ್, ಕುಲ್‌ದೀಪ್ ಯಾದವ್, ಭುವನೇಶ್ವರ ಕುಮಾರ್, ಉಮೇಶ್ ಯಾದವ್ ಹಾಗೂ ಇಶಾಂತ್ ಶರ್ಮ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News