ದೇಶಕ್ಕೆ ಗುಜರಾತ್ ಮಾದರಿಯ ಬೇಡ;ಅಂಬೇಡ್ಕರರ ಸಂವಿಧಾನದ ಮಾದರಿಯ ಅಭಿವೃದ್ಧಿ ಬೇಕಾಗಿದೆ - ಜಿಗ್ನೇಶ್ ಮೆವಾನಿ

Update: 2017-02-14 15:11 GMT

ಮಂಗಳೂರು,ಫೆ.14:ದೇಶಕ್ಕೆ ಮೋದಿಯ ಗುಜರಾತ್ ಮಾದರಿಯ ಅಭಿವೃದ್ಧಿ ಬೇಡ ಡಾ.ಬಾಬಾ ಸಾಹೇಬ್ ಅಂಬೇಡ್ಕರರ ಸಂವಿಧಾನದ ಮಾದರಿಯ ಸಮಾತೆಯ ,ಜಾತ್ಯತೀತ ತಳಹದಿಯ ಅಭಿವೃದ್ಧಿ ಬೇಕಾಗಿದೆ ಎಂದು ಸಾಮಾಜಿಕ ಹೋರಾಟಗಾರ ಜಿಗ್ನೇಶ್ ಮೇವಾನಿ ಹೇಳಿದ್ದಾರೆ.

ನಗರದ ಪುರಭವನದಲ್ಲಿ ಇಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ವತಿಯಿಂದ ಹಮ್ಮಿಕೊಂಡ ವಿದ್ಯಾರ್ಥಿ ಜಾಗೃತಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು.

ಮೋದಿ ಮಾದರಿಯ ಅಭಿವೃದ್ಧಿ ಕೋಮುವಾದ,ಜಾತಿವಾದವನ್ನು ಒಳಗೊಂಡಿದೆ.ರೈತರು,ಕಾರ್ಮಿಕರನ್ನು ಲೂಟಿ ಹೊಡೆಯುವ ಅಭಿವೃದ್ಧಿ ನಮಗೆ ಬೇಕಾಗಿಲ್ಲ.ಬಡವ -ಶ್ರೀಮಂತ ಎನ್ನುವ ತಾರತಮ್ಯವಿಲ್ಲದೆ ಎಲ್ಲರಿಗೂ ಸಮಾನ ಶಿಕ್ಷಣ,ಊಟ,ಉಡುಪು ದೊರೆಯುವ ಮಾದರಿ ಬೇಕಾಗಿದೆ.ಅಚ್ಛೇದಿನದ ಹೆಸರಿನಲ್ಲಿ ಅಂಬಾನಿ -ಅದಾನಿ ಯಂತಹ ಉದ್ಯಮಿಗಳು ಪೂರಕವಾಗಿದೆ.ನೋಟು ನಿಷೇಧದ ಸಂದರ್ಭದಲ್ಲಿ ಕಪ್ಪು ಹಣ ತರುತ್ತೇನೆ ಎಂದರು. ಭವ್ಯಬಂಗಲೆಯಲ್ಲಿ ವಾಸಮಾಡುತ್ತಿದ್ದ ಅಂಬಾನಿಯಯಂತಹ ಉದ್ಯಮಿಗಳ ಕೋಟ್ಯಾಂತರ ಹಣ,ಭೂಮಿಯನ್ನು ವಾಪಾಸು ಪಡೆಯಲು ಸಾಧ್ಯವಾಗಿಲ್ಲ.ಮನುವಾದಿ ಮನಸ್ಥಿತಿಯ ಸರಕಾರ ನಮ್ಮನ್ನಾಳುತ್ತಿರುವ ಕಾರಣ ಪ್ರಜಾಪ್ರಭುತ್ವ ವ್ಯವಸ್ಥೆಗೆ ಹೋರಾಟ ನಡೆಸಿ ಕಣ್ಮರೆಯಾದ ನಝೀಬನ ತಾಯಿಯನ್ನು ಬಂಧಿಸುತ್ತಾರೆ.ರೋಹಿತ್ ವೇಮುಲನ ತಾಯಿಗೆ ಕಿರುಕುಳ ನೀಡುತ್ತಾರೆ.

ಆರ್‌ಎಸ್‌ಎಸ್‌ಗೆ ವಿರುದ್ಧವಾಗಿ ಸಂವಿಧಾನ ಸುರಕ್ಷಾ ಸಮಿತಿ:- ದೇಶದ ಆಂತರಿಕ ಭದ್ರತೆಗೆ ಹಿಂಧುತ್ವದ ಎಜೆಂಡಾ ಹೊಂದಿರುವ ಸಂಘಪರಿವಾರದಿಂದ ಅಪಾಯವಿದೆ.ಮಾಲೆಗಾಂವ್ ಸ್ಫೋಟದಲ್ಲಿ ಸಂಘಪರಿವಾರದ ರಾಷ್ಟ್ರವಿರೊಧಿ ಕೃತ್ಯ ಸಾಭೀತಾಗಿದೆ.ಜಾತಿವಾದ,ಕೋಮುವಾದ ನಾಶವಾಗದೆ ಸಂವಿಧಾನದ ಆಶಯಗಳು ಜಾರಿಗೊಳ್ಳಲು ಸಾಧ್ಯವಿಲ್ಲ.ಸಂವಿಧಾನದ ಉಳಿವಿಗಾಗಿ ದಲಿತರು,ಅಲ್ಪ ಸಂಖ್ಯಾತರು ಜೊತೆಯಾಗಿ ಹೋರಾಡಬೇಕಾಗಿದೆ.ಅದಕ್ಕಾಗಿ ಆರ್‌ಎಸ್‌ಎಸ್‌ಗೆ ವಿರುದ್ಧವಾಗಿ ಸಂವಿಧಾನ ಸುರಕ್ಷಾ ಸಮಿತಿ ರಚನೆಗೆ ದೇಶಾದ್ಯಂತ ಜಲ್ಲಾ ಮಟ್ಟದಲ್ಲೂ ಚಾಲನೆ ನೀಡಲಾಗುವುದು ಎಂದು ಜಿಗ್ನೇಶ್ ಮೆವಾನಿ ತಿಳಿಸಿದರು.

ದೇಶದಲ್ಲಿ ಮನುವಾದಿ ಶಕ್ತಿಗಳ ರಾಜನೀತಿಯಿಂದಾಗಿ ಸಂವಿಧಾನದ ಜಾಗದಲ್ಲಿ ಜಾತಿ ವ್ಯವಸ್ಥೆ,ಲವ್ ಜಿಹಾದಿ ರಾಜನೀತಿಯನ್ನು ಮುಂದಿಡುತ್ತಿದ್ದಾರೆ.ದೇಶದಲ್ಲಿ ಮೋಹನ್ ಭಾಗವತ್ ಮಹಾಭಾರತದ ದ್ರೋಣಾಚಾರ್ಯನ ಸ್ಥಾನದಲ್ಲಿ ಕುಳಿತು ದೆಹಲಿಯಲ್ಲಿರುವ ದುರ್ಯೋಧನ,ದುಶ್ಯಾಸನರ ನಡುವೆ ರೋಹಿತ್ ವೇಮುಲನಂತಹ ಏಕಲವ್ಯನ ಬೆರಳು ಕತ್ತರಿಸುವ ಕೃತ್ಯ ನಡೆಸುತ್ತಿದ್ದಾರೆ.ದೇಶದಲ್ಲಿ ಮನುಸ್ಕೃತಿಯ ಆಧಾರದ ರಾಜನೀತಿಯಿಂದ ಆರ್ಥಿಕ ಸ್ಥಿತಿ ಸಂಕಷ್ಟದಲ್ಲಿದೆ.ಫ್ಯಾಸಿಸಂ ಮತ್ತು ಕೋಮುವಾದ ಜೊತೆಯಾಗಿ ಉದ್ಯಮ ಶಾಹಿಗಳ ಪರವಾದ ಆರ್ಥಿಕ ನೀತಿಯಿಂದ ರೈತರು,ಕಾರ್ಮಿಕರು ಸಂಕಷ್ಟಕ್ಕಿಡಾಗಿದ್ದಾರೆ ರೈತರ ಆತ್ಮಹತ್ಯೆ ಹೆಚ್ಚುತ್ತಿದೆ.ಅಹಮ್ಮದಾಬಾದ್ ,ಗುಜರಾತಿನಲ್ಲಿ ಮಸಲ್ಮಾನರು ಭಯದಲ್ಲಿ ಬದುಕುವಂತಾಗಿದೆ ಎಂದು ಮೇವಾನಿ ತಿಳಿಸಿದರು.

ದೇಶದಲ್ಲಿ ಜನಸಾಮಾನ್ಯರಿಗೆ ಭಯದ ವಾತವರಣ :- ಶೇ 86ರಷ್ಟು ಚಲಾವಣೆಯಲ್ಲಿದ್ದ ನೊಟುಗಳನ್ನು ಅಮಾನ್ಯ ಮಾಡಿರುವ ಮೋದಿಯವರ ಸರ್ಜಿಕಲ್ ಸ್ಟ್ರೈಕ್‌ನಿಂದ ದೇಶದ ಜನ ಭಯದ ವಾತವರಣದಲ್ಲಿ ಬದುಕುವಂತಾಗಿದೆ.ಕ್ರೆಡಿಟ್,ಡಿಬಿಟ್ ಕಾರ್ಡ್ ,ಎಟಿಎಂ ವ್ಯವಹಾರಗಳು ಗೊತ್ತಿಲ್ಲದ ಜನರು ಬವಣೆ ಪಡುವಂತಾಯಿತು.ದೇಶದಲ್ಲಿ ದರ್ಮದೊಡನೆ ಫಾಸಿಸಂ ಸೇರ್ಪಡೆಗೊಂಡ ರಾಜಕೀಯ ನಡೆಯುತ್ತಿದೆ ಇದರ ವಿರುದ್ಧ ಜಾಗೃತರಾಗಬೇಕಾಗಿದೆ ಎಂದು ತೇಜಸ್ ದೈನಿಕದ ಸಂಪಾದಕ ಪ್ರೊ.ಪಿ.ಕೋಯ ತಿಳಿಸಿದರು.

ಟಿಪ್ಪು ಸುಲ್ತಾನ್ ಅಪ್ರತಿಮ ದೇಶ ಭಕ್ತ ಎನ್ನುವುದನ್ನು ಸಂಘ ಪರಿವಾರದ ಹಿರಿಯ ಮುಖಂಡರೆ ಒಪ್ಪಿರುವ ದಾಖಲೆ ಇದೆ:- ಟಿಪ್ಪು ಸುಲ್ತಾನ್ ಮತ್ತು ಝಾನ್ಸಿರಾಣಿ ಲಕ್ಷ್ಮೀ ಬಾಯಿ ಯವರ ಭಾವಚಿತ್ರವಿರುವ ಸಂವಿಧಾನದ ದಾಖಲೆಯ ಮೂಲ ಪ್ರತಿ ಯಲ್ಲಿ ಬಿಜೆಪಿಯ ಶ್ಯಾಮ್ ಪ್ರಸಾದ್ ಮುಖರ್ಜಿಯವರ ಸಹಿ ಇರುವ ದಾಖಲೆ ಇದ್ದರೂ ಈಗಿನ ಸಂಘಪರಿವಾರದವರಿಗೆ ಟಿಪ್ಪು ವನ್ನು ದೇಶ ಭಕ್ತ ಎನ್ನಲು ಸಾಧ್ಯವಾಗುವುದಿಲ್ಲ.ದ್ಯದ ಪರಿಸ್ಥಿತಿಯಲ್ಲಿ ಭಾರತವನ್ನು ಡಾ.ಬಾಬಾ ಸಾಹೇಬ ಅಂಬೇಡ್ಕರರ ಸಂವಿಧಾನದ ದಾಖಲೆಯಿಂದ ಮಾತ್ರ ಉಳಿಸಬಹುದು.ದೇಶದಲ್ಲಿ ಬೆಳೆಯುತ್ತಿರುವ ಫಾಸಿಸಂ ಶಕ್ತಿಗಳನ್ನು ತಡೆಯಲು ಅಂಬೇಡ್ಕರ್ ಹೇಳಿದಂತೆ ದಲಿತರು,ಅಲ್ಪ ಸಂಖ್ಯಾತರು ಶಾಸನ ರಚನೆ ಮಾಡುವ ಜಾಗಕ್ಕೆ ಹೋಗಬೇಕಾಗಿದೆ ಎಂದು ಹಿಂದುಳಿದ ಆಯೋಗದ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ್ ತಿಳಿಸಿದ್ದಾರೆ.

ಪ್ರೇಮದ ಪರಿಭಾಷೆ ಗೊತ್ತಿಲ್ಲದ ಮೋದಿಗೆ ವ್ಯಾಲೆಂಟೈನ್ ಡೇಯ ಶುಭಾಯವನ್ನು ಯಶೋದ ಬೆನ್ ಹೇಳಬೇಕಾಗಿದೆ.ಗೋದ್ರಾದಲ್ಲಿ ಉಂಟಾಗಿರುವ ರಕ್ತ ಸಿಕ್ತ ಕೈಗಳನ್ನು ಗೋಮಾತಯೆ ಗಂಜಲದಲ್ಲಿ ಅದ್ದಿ ತೆಗೆದರೂ ಪವಿತ್ರವಾಗಲಾರದು.ಜನರ ಮನಸ್ಸಿನಲ್ಲಿ ತುಂಬಿರುವ ವಿಚ್ಛಿದ್ರಕಾರಿ ಆಲೋಚನೆಗಳನ್ನು ತಗೆದು ಹಾಕುವ ಕೆಲಸ ಮೊದಲು ಆಗಬೇಕಾಗಿದೆ ಎಂದು ಲೇಖಕ ಯೋಗೇಶ್ ಮಾಸ್ಟರ್ ತಿಳಿಸಿದರು.

ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಫಾಸಿಸಂ ವಿರುದ್ಧ ಜಗತ್ತಿನ ಹಲವು ರಾಷ್ಟ್ರಗಳು ಒಂದಾದಂತೆ ದೇಶದ ಜಾತಿವಾದಿಗಳ,ಕೋಮುವಾದಿಗಳ ವಿರುದ್ಧ ದಲಿತರು ಮುಸಲ್ಮಾನರು ಒಂದಾಗಬೇಕಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಸುಂಕಣ್ಣ ವೇಲ್ಬುಲಾ ತಿಳಿಸಿದರು.

ಸಮಾರಂಭದಲ್ಲಿ ಕ್ಯಾಂಫಸ್ ಫ್ರಂಟ್‌ನ ರಾಷ್ಟ್ರೀಯ ಅಧ್ಯಕ್ಷ ಶುಹೈಬ್ ಪಿ.ವಿ,ಪ್ರಧಾನ ಕಾರ್ಯದರ್ಶಿ ಟಿ.ಅಬ್ದುಲ್ ನಾಝಿರ್, ಲುಬ್ನಾ ಮಿನಾಝ್,ಮುಸ್ತಾಫ ತಮಿಳುನಾಡು, ಮುಹಮ್ಮದ್ ತುಫೈಲ್,ಶಬನಾ,ಸಲಹೆಗಾರರಾದ ಕೆ.ಎಂ.ಶರೀಫ್, ನಿಬ್ರಾಸ್ ಕೇರಳ,ಸಾಜಿದ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News