ಕಬಕ -ಕುಂಡಡ್ಕ ರಸ್ತೆ ನಿರ್ಲಕ್ಷ್ಯದ ಆರೋಪ-ಪ್ರತಿಭಟನೆಯ ಎಚ್ಚರಿಕೆ
ಪುತ್ತೂರು,ಫೆ.14 : ತೀರಾ ಹದಗಟ್ಟಿರುವ ಕಬಕ-ಕೊಡಿಪ್ಪಾಡಿ-ಓಜಾಲ-ಕುಂಡಡ್ಕ ಜಿಲ್ಲಾ ಪಂಚಾಯತ್ ರಸ್ತೆಯು ತೀರಾ ಹದೆಗೆಟ್ಟಿದ್ದು ಈ ರಸ್ತೆಯನ್ನು ಸಂಪೂರ್ಣ ದರಸ್ತಿಗೊಳಿಸುವ ಮೂಲಕ ಸಮಗ್ರ ಅಭಿವೃದ್ಧಿ ಮಾಡದಿದ್ದಲ್ಲಿ ಸಾರ್ವಜನಿಕ ಪ್ರತಿಭಟನೆ-ಜನಾಂದೋಲನ ನಡೆಸುವ ಅನಿವಾರ್ಯತೆ ಎದುರಾಗುತ್ತದೆ ಎಂದು ಗ್ರಾಮಸ್ಥರಾದ ಕಬಕ ಗ್ರಾ.ಪಂನ ಮಾಜಿ ಸದಸ್ಯ ಚಂದ್ರಶೇಖರ್ ಎ.ಎಸ್ ಎಚ್ಚರಿಸಿದ್ದಾರೆ.
ಈ ರಸ್ತೆಯು ದುರಸ್ತಿ ಕಾಣದೆ ಸುಮಾರು 30 ವರ್ಷಗಳು ಕಳೆದಿದೆ. ಪ್ರಸ್ತುತ ರಸ್ತೆ ನಾಮಾವಶೇಷ ಸ್ಥಿತಿಯಲ್ಲಿದ್ದು,ಚರಂಡಿ,ಮೋರಿ,ಡಾಂಬರನ್ನು ಹುಡುಕಬೇಕಾದ ಸ್ಥಿತಿ ಬಂದಿದೆ. ರಸ್ತೆ ತೀರಾ ಹದಗೆಟ್ಟಿರುವುದರಿಂದ ವಾಹನ ಸಂಚಾರಕ್ಕೆ ತೀರಾ ಸಮಸ್ಯೆಯಾಗಿದ್ದು, ರಸ್ತೆಯನ್ನು ಕೂಡಲೇ ಸಂಪೂರ್ಣವಾಗಿ ದುರಸ್ತಿಗೊಳಿಸಿ ,ಡಾಂಬರೀಕರಣಗೊಳಿಸುವ ಮೂಲಕ ಸಮಗ್ರ ಅಭಿವೃದ್ಧಿ ಪಡಿಸಬೇಕೆಂದು ಆಗ್ರಹಿಸಿ ಅವರು ಕೊಡಿಪ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಈ ರಸ್ತೆಯನ್ನು ಅಭಿವೃದ್ಧಿ ಪಡಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದು ಗ್ರಾಮ ಪಂಚಾಯತ್‌ನಿಂದ ಹಿಡಿದು ಜಿಲ್ಲಾ ಪಂಚಾಯತ್ ತನಕದ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾರೊಬ್ಬರೂ ಗಮನ ಹರಿಸಿಲ್ಲ. ಸರ್ಕಾರದ ಕಡೆಯಿಂದ ಈ ರಸ್ತೆಗೆ ಅನುದಾನವೂ ಬಿಡುಗಡೆಯಾಗಿಲ್ಲ. ಶಾಸಕರ ಪ್ರದೇಶಾಭಿವೃದ್ಧಿ ಯೋಜನೆ,ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿಯ ರೂ.64ಕೋಟಿ ಅನುದಾನದ ಪಟ್ಟಿಯಲ್ಲೂ ಈ ರಸ್ತೆ ಸ್ಥಾನ ಪಡೆದಿಲ್ಲ. ಈ ರಸ್ತೆಯನ್ನು ಕಡೆಗಣಿಸಿ ರಾಜಕೀಯ ಕಾರಣಗಳಿಗಾಗಿ ಪಾಂಡೇಲು-ಗಾಳಿಗುಡ್ಡೆ-ಕಂಪ ರಸ್ತೆಯ ಅಭಿವೃದ್ಧಿಗೆ ರೂ. 1.30 ಕೋಟಿ ಅನುದಾನ ನೀಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ರಸ್ತೆಯ ಅಭಿವೃದ್ಧಿಗೆ ಸಂಬಂಧಿಸಿ ಸಲ್ಲಿಸಲಾದ ಮನವಿಯನ್ನು ಅಧಿಕಾರಿಗಳು ,ಸಚಿವರು,ಜನಪ್ರತಿನಿಧಿಗಳು ನಿರ್ಲಕ್ಷಿಸಿರುವ ಕಾರಣ ಹೋರಾಟದ ಹಾದಿ ಹಿಡಿಯುವುದು ಅನಿವಾರ್ಯವಾಗಿದೆ. ಮುಂದಿನ 20 ದಿನಗಳೊಳಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭಗೊಳ್ಳದಿದ್ದಲ್ಲಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಈ ರಸ್ತೆಯಲ್ಲಿ ರಸ್ತೆ ತಡೆ ಸಹಿತ ಪ್ರಬಲ ಜನಾಂದೋಲನ -ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.