×
Ad

ಉಡುಪಿಯ 37 ರಾಷ್ಟ್ರಮಟ್ಟದ ಕ್ರೀಡಾಪಟುಗಳಿಗೆ ಸನ್ಮಾನ

Update: 2017-02-14 19:27 IST

ಉಡುಪಿ, ಫೆ.14: ಉಡುಪಿ ಜಿಲ್ಲಾ ಪದವಿಪೂರ್ವ ಕಾಲೇಜುಗಳ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ವತಿಯಿಂದ 2016-17ನೆ ಸಾಲಿನಲ್ಲಿ ಉಡುಪಿ ಜಿಲ್ಲೆಯಿಂದ ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿರುವ ಮತ್ತು ಪದಕ ವಿಜೇತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭವನ್ನು ಮಂಗಳವಾರ ಉಡುಪಿ ಪಿಪಿಸಿ ಮಿನಿ ಆಡಿಟೋರಿಯಂನಲ್ಲಿ ಆಯೋಜಿಸಲಾಗಿತ್ತು.

ಕರಾಟೆಯಲ್ಲಿ ಬೆಳ್ಳಿ ಪದಕ ಪಡೆದ ಪಿಪಿಸಿಯ ತೃಪ್ತಿ ಎಚ್.ಕೆ. ಮತ್ತು ಕಂಚು ಗೆದ್ದುಕೊಂಡ ಕಿದಿಯೂರು ಶಾಮಿಲಿ ಪದವಿ ಪೂರ್ವ ಕಾಲೇಜಿನ ಸಂಪತ್ ಕುಮಾರ್, ವಾಲಿಬಾಲ್‌ನಲ್ಲಿ ಬೆಳ್ಳಿ ಪದಕ ಪಡೆದ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಪ್ರತೀಕ್ಷಾ ಮತ್ತು ಕ್ರೀಡೆಯಲ್ಲಿ ಭಾಗವಹಿಸಿದ 34 ವಿದ್ಯಾರ್ಥಿಗಳನ್ನು ಉಡುಪಿ ಶ್ರೀಅದಮಾರು ಮಠ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ ಸನ್ಮಾನಿಸಿದರು.

 ದೇಹ ಮತ್ತು ಮನಸ್ಸಿನ ಸಮತೋಲನವನ್ನು ಕಾಪಾಡಲು ಕ್ರೀಡೆ ಅತಿ ಮುಖ್ಯ. ಕೇವಲ ಹಣ ಮತ್ತು ಆಹಾರದಿಂದ ಮನಸ್ಸಿಗೆ ನೆಮ್ಮದಿ ನೀಡಲು ಸಾಧ್ಯವಿಲ್ಲ. ಅದಕ್ಕೆ ಕ್ರೀಡೆ ಅಗತ್ಯವಾಗಿದೆ. ಪಾಠ ಮಾಡುವ ಶಿಕ್ಷಕರು ಹಾಗೂ ಪಠ್ಯೇತರ ಶಿಕ್ಷಕರು ಸಮಾನರು. ಆದುದರಿಂದ ಪಾಠ ಮಾಡುವ ಶಿಕ್ಷಕರು ಪಠ್ಯೇತರ ಶಿಕ್ಷಕರ ಕುರಿತ ಕೀಳರಿಮೆಯನ್ನು ಬಿಡಬೇಕು ಎಂದು ಸ್ವಾಮೀಜಿ ಹೇಳಿದರು.

ಮುಖ್ಯ ಅತಿಥಿಗಳಾಗಿ ಪಿಪಿಸಿ ಆಡಳಿತ ಮಂಡಳಿ ಕಾರ್ಯದರ್ಶಿ ಡಾ. ಚಂದ್ರಶೇಖರ್, ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಗದೀಶ್ ಶೆಟ್ಟಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಂದೀಪ್ ಕುಮಾರ್, ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ನ್ಯಾಯವಾದಿ ಸುಪ್ರಸಾದ್ ಶೆಟ್ಟಿ, ಜಿಲ್ಲಾ ಹ್ಯಾಂಡ್‌ಬಾಲ್ ಅಸೋಸಿಯೇಶನ್ ಅಧ್ಯಕ್ಷ ಹರೀಶ್ ಕಿಣಿ ಉಪಸ್ಥಿತರಿದ್ದರು.

ಅಧ್ಯಕ್ಷತೆಯನ್ನು ಉಡುಪಿ ಪೂರ್ಣಪ್ರಜ್ಞ ಸಂದ್ಯಾ ಕಾಲೇಜು ಆಡಳಿತ ಮಂಡಳಿಯ ಕಾರ್ಯದರ್ಶಿ ಪ್ರದೀಪ್ ಕುಮಾರ್ ವಹಿಸಿದ್ದರು. ಸಂಘದ ಅಧ್ಯಕ್ಷ ಶರತ್ ರಾವ್ ಸ್ವಾಗತಿಸಿದರು. ಅಶ್ವಥ್ ಭಾರಧ್ವಾಜ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News