×
Ad

ಉಳ್ಳಾಲ: ಪೊಲೀಸ್ ಜನಸಂಪರ್ಕ ಸಭೆ

Update: 2017-02-14 19:28 IST

ಉಳ್ಳಾಲ, ಫೆ.14: ಉಳ್ಳಾಲ ಆಸುಪಾಸು ಇತ್ತೀಚೆಗೆ ನಡೆಯುತ್ತಿರುವ ಅಹಿತಕರ ಘಟನೆಯ ಹಿನ್ನೆಲೆಯಲ್ಲಿ ಸೋಮವಾರ ಉಳ್ಳಾಲ ಬಸ್ತಿಪಡ್ಪುನಲ್ಲಿ ಜನಸಂಪರ್ಕ ಸಭೆ ನಡೆಯಿತು.

ಉಳ್ಳಾಲದಲ್ಲಿ ಹಾಡಹಗಲೇ ರೌಡಿಗಳ ಅಟ್ಟಹಾಸ ಮುಂದುವರಿದಿದೆ. ಇವರನ್ನು ಮಟ್ಟಹಾಕಲು ಪೊಲೀಸರು ಸಕಾಲಕ್ಕೆ ಸ್ಪಂದಿಸಬೇಕು. ರೌಡಿಗಳ ಬಗ್ಗೆ ಎಲ್ಲರಿಗೂ ಪರಿಚಯವಿದೆ, ಯಾವುದೇ ಭಯವಿಲ್ಲದೆ ಮಾಹಿತಿ ನೀಡಿ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರೆ ಕರೆ ಮಾಡಿದಾಗ ತಕ್ಷಣಕ್ಕೆ ಸ್ವೀಕರಿಸಬೇಕು. ಇದಿಂದ ರೌಡಿಗಳನ್ನು ರೆಡ್‌ಹ್ಯಾಂಡಾಗಿ ಹಿಡಿಯಬಹುದು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟರು.

  ಮೇಲಂಗಡಿ ಮುಹಿಯುದ್ದೀನ್ ಜುಮ್ಮಾ ಮಸೀದಿಯ ಅಧ್ಯಕ್ಷ ಫಾರೂಕ್ ಉಳ್ಳಾಲ್ ಮಾತನಾಡಿ, ರೌಡಿಗಳು ಹಗಲಿನಲ್ಲೂ ಕೂಡ ತಲವಾರು ಹಿಡಿದು ಜನರನ್ನು ಬೆದರಿಸುವುದು, ಸಾರ್ವಜನಿಕವಾಗಿ ಪಂಥಾಹ್ವಾನ ಮಾಡುವುದು ನಡೆಯುತ್ತಲೇ ಇದೆ. ಜೈಲಿನೊಳಗಿನಿಂದಲೂ ಅಂತರ್ಜಾಲ ಮುಖಾಂತರ ಮಾತನಾಡಲಾಗುತ್ತದೆ ಎಂದು ಆರೋಪಿಸಿದರು.

ಇನ್‌ಸ್ಪೆಕ್ಟರ್ ಗೋಪಿಕೃಷ್ಣ ಮಾತನಾಡಿ, ಯಾರೂ ಹುಟ್ಟುವಾಗಲೇ ದುಷ್ಕರ್ಮಿಗಳಾಗಿರುವುದಿಲ್ಲ, ಪರಿಸರ, ವ್ಯಕ್ತಿಯಿಂದ ಕೆಟ್ಟವರಾಗುತ್ತಾರೆ, ದುಷ್ಕರ್ಮಿಗಳ ಬಗ್ಗೆ ಎಲ್ಲರಿಗೂ ಪರಿಚಯವಿದ್ದು ಭಯದಿಂದ ಹೆಸರು ಹೇಳುತ್ತಿಲ್ಲ. ಮಾಹಿತಿದಾರರ ಹೆಸರು ಯಾವುದೇ ಕಾರಣಕ್ಕೂ ಬಹಿರಂಗಪಡಿಸುವುದಿಲ್ಲ, ಈ ಬಗ್ಗೆ ಆತಂಕ ಬೇಡ. ಎಲ್ಲದಕ್ಕೂ ಮಾದಕ ವ್ಯಸನ ಕಾರಣವಾಗುತ್ತಿದ್ದು ಈ ಬಗ್ಗೆ ಇಲಾಖೆಯೂ ಜಾಗೃತಿ ಮೂಡಿಸುತ್ತಿದೆ ಎಂದರು.

ನ್ಯಾಯವಾದಿ ರವಿ ಮಾತನಾಡಿ, ನಾಲ್ಕು ದಿನಗಳ ಹಿಂದೆ ಕೆಲವು ದುಷ್ಕರ್ಮಿಗಳು ಹೊಟೇಲ್‌ಗೆ ಹೋಗಿ ತಲವಾರು ಬೀಸಿದ್ದಾರೆ. ಅಲ್ಲಿ ಯಾರೂ ಇರದ ಕಾರಣ ಅನಾಹುತ ತಪ್ಪಿದೆ. ದುಷ್ಕರ್ಮಿಗಳು ಅರ್ಧ ಗಂಟೆ ಪರಿಸರದಲ್ಲೇ ಇದ್ದರು. ಇದನ್ನು ಕಣ್ಣಾರೆ ಕಂಡು ಪೊಲೀಸ್ ಠಾಣೆಗೆ ಕರೆ ಮಾಡಿದರೂ ಸಕಾಲಕ್ಕೆ ಸ್ಪಂದಿಸಲಿಲ್ಲ. ಸೋಮವಾರವೂ ತಲವಾರು ಹಿಡಿದು ದುಷ್ಕರ್ಮಿಗಳು ಸುತ್ತಾಡುತ್ತಿದ್ದರು. ಅದನ್ನು ಕಂಡು ಠಾಣೆಗೆ ಕರೆ ಮಾಡಿದಾಗಲೂ ಯಾರೂ ಸ್ವೀಕರಿಸಿಲ್ಲ. ಇನ್ನಾದರೂ ತಕ್ಷಣಕ್ಕೆ ಕರೆ ಸ್ವೀಕರಿಸಿ ಸಹಕರಿಸಿ ಎಂದು ಮನವಿ ಮಾಡಿದರು.

ಉಳ್ಳಾಲಕ್ಕೆ ಅಂಟಿದ್ದ ಕೋಮು ಸೂಕ್ಷ್ಮ ಎನ್ನುವ ಹೆಸರನ್ನು ಅಳಿಸುವಂತೆ ಇಲಾಖೆಗೆ ಮನವಿ ಮಾಡಲಾಗಿತ್ತು. ಒಂದು ವರ್ಷದಿಂದ ಉಳ್ಳಾಲ ಶಾಂತವಾಗಿದ್ದರೂ ಇದೀಗ ಗಾಂಜಾ ಹಾವಳಿಯಿಂದ ಉಳ್ಳಾಲದ ಹೆಸರು ಕೆಡುತ್ತಿವೆ. ಹಾಗಾಗಿ ಪ್ರತಿ ಮೊಹಲ್ಲಾದಲ್ಲೂ ಜಾಗೃತಿ ಸಭೆ ನಡೆಯಲು ಸಹಕಾರ ನೀಡಲಾಗುವುದು ಎಂದು ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುರ್ರಶೀದ್ ಹೇಳಿದರು.

ಎಸಿಪಿ ಶೃತಿ ಎನ್, ಎಸ್ಸೈ ರಾಜೇಂದ್ರ, ದರ್ಗಾ ಸಮಿತಿ ಸದಸ್ಯರಾದ ಯು.ಕೆ.ಇಲ್ಯಾಸ್, ಕೌನ್ಸಿಲರ್ ಹುಸೈನ್ ಪೊಡಿಮೋನು, ಉಸ್ಮಾನ್ ಮೊದಲಾದವರು ಉಪಸ್ಥಿತರಿದ್ದರು. ಅಝೀಝ್ ಹಕ್ ಕಾರ್ಯಕ್ರಮ ನಿರೂಪಿಸಿದರು....

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News