ಉತ್ತರ ಕೊರಿಯ ನಾಯಕನ ಅರೆ ಸಹೋದರ ಮಲೇಶ್ಯದಲ್ಲಿ ಕೊಲೆ
ಸಿಯೋಲ್, ಫೆ. 14: ಉತ್ತರ ಕೊರಿಯದ ನಾಯಕ ಕಿಮ್ ಜಾಂಗ್ ಉನ್‌ರ ಅರೆ ಸಹೋದರ ಮಲೇಶ್ಯದಲ್ಲಿ ಕೊಲೆಯಾಗಿದ್ದಾರೆ ಎಂದು ದಕ್ಷಿಣ ಕೊರಿಯದ ಮಾಧ್ಯಮಗಳು ಮೂಲಗಳನ್ನು ಉಲ್ಲೇಖಿಸಿ ಮಂಗಳವಾರ ವರದಿ ಮಾಡಿವೆ.
ಕಿಮ್ ಜಾಂಗ್ ನಾಮ್ ಸೋಮವಾರ ಬೆಳಗ್ಗೆ ಮಲೇಶ್ಯದಲ್ಲಿ ಕೊಲೆಗೀಡಾಗಿದ್ದಾರೆ ಎಂದು ದಕ್ಷಿಣ ಕೊರಿಯ ಸರಕಾರದ ಮೂಲಗಳನ್ನು ಉಲ್ಲೇಖಿಸಿ ಯೊನ್‌ಹಾಪ್ ವರದಿ ಮಾಡಿದೆ. ಆದರೆ, ಅದು ಹೆಚ್ಚಿನ ವಿವರಗಳನ್ನು ನೀಡಿಲ್ಲ.
ಉತ್ತರ ಕೊರಿಯದ ಏಜಂಟ್‌ಗಳೆಂದು ಹೇಳಲಾದ ಇಬ್ಬರು ಮಹಿಳೆಯರು ಕೌಲಾಲಂಪುರ ವಿಮಾನ ನಿಲ್ದಾಣದಲ್ಲಿ ಕಿಮ್‌ಗೆ ವಿಷಪ್ರಾಶನ ಮಾಡಿದ್ದಾರೆ ಎಂದು ‘ಟಿವಿ ಚೋಸನ್’ ಹೇಳಿದೆ. ಈ ಮಹಿಳೆಯರು ತಪ್ಪಿಸಿಕೊಂಡಿದ್ದಾರೆ ಎಂದು ಅದು ತಿಳಿಸಿದೆ.
ಗುರುತು ಪತ್ತೆಯಾಗದ ಉತ್ತರ ಕೊರಿಯದ ವ್ಯಕ್ತಿಯೊಬ್ಬರು ಕೌಲಾಲಂಪುರ ವಿಮಾನ ನಿಲ್ದಾಣದಿಂದ ಆಸ್ಪತ್ರೆಗೆ ಕರೆದೊಯ್ಯುವ ದಾರಿಯಲ್ಲಿ ಮೃತಪಟ್ಟಿದ್ದಾರೆ ಎಂದು ಮಲೇಶ್ಯ ಪೊಲೀಸರು ‘ರಾಯ್ಟರ್ಸ್’ಗೆ ಹೇಳಿದ್ದಾರೆ.
ಕಿಮ್ ಜಾಂಗ್ ನಾಮ್ ಮತ್ತು ಕಿಮ್ ಜಾಂಗ್ ಉನ್ ಇಬ್ಬರೂ ಉತ್ತರ ಕೊರಿಯದ ಮಾಜಿ ನಾಯಕ ಕಿಮ್ ಜಾಂಗ್ ಇಲ್ ಅವರ ಪುತ್ರರು. ಆದರೆ, ಅವರ ತಾಯಂದಿರು ಬೇರೆ ಬೇರೆ. ಕಿಮ್ ಜಾಂಗ್ ಇಲ್ 2011ರಲ್ಲಿ ನಿಧನರಾಗಿದ್ದಾರೆ.
ಉತ್ತರ ಕೊರಿಯದ ರಾಜಕೀಯದಲ್ಲಿ ತನಗೆ ಆಸಕ್ತಿಯಿಲ್ಲ ಎಂಬುದಾಗಿ ಕಿಮ್ ಜಾಂಗ್ ನಾಮ್ ಈ ಹಿಂದೆ ಹಲವಾರು ಬಾರಿ ಹೇಳಿಕೊಂಡಿದ್ದರು.