×
Ad

ಎಸ್.ಡಿ.ಎಂ. ಕಾಲೇಜಿನಲ್ಲಿ ಕಥೆ-ಕವನ ಅನುಸಂಧಾನ ಶಿಬಿರ

Update: 2017-02-14 20:58 IST

ಬೆಳ್ತಂಗಡಿ,ಫೆ.14; ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಾಹಿತ್ಯದ ಅಧ್ಯಯನದೊಂದಿಗೆ ಪುಸ್ತಕ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು ಎಂದು ಧರ್ಮಸ್ಥಳದ ಹೇಮಾವತಿ ವಿ. ಹೆಗ್ಗಡೆಯವರು ಹೇಳಿದರು.

ಅವರು ಸೋಮವಾರ ಉಜಿರೆಯಲ್ಲಿ ಎಸ್.ಡಿ.ಎಂ. ಕಾಲೇಜಿನಲ್ಲಿ ಕನ್ನಡ ಸಂಘ, ನೀನಾಸಂ ಪ್ರತಿಷ್ಠಾನ, ಹೆಗ್ಗೋಡು ಮತ್ತು ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಎರಡು ದಿನಗಳ ಕಥೆ-ಕವನ ಅನುಸಂಧಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಟಿ.ವಿ., ಸಂಚಾರಿ ದೂರವಾಣಿ ಹಾಗೂ ಸಾಮಾಜಿಕ ಜಾಲತಾಣಗಳಿಂದಾಗಿ ಇಂದು ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಕಡಿಮೆಯಾಗಿದೆ. ವಿದ್ಯಾರ್ಥಿಗಳು ಗ್ರಂಥಾಲಯದ ಸದುಪಯೋಗ ಪಡೆದು ತಮ್ಮ ಜ್ಞಾನ ಕ್ಷಿತಿಜವನ್ನು ವಿಸ್ತರಿಸಿಕೊಳ್ಳಬೇಕು. ಬದ್ಧತೆಯಿಂದ ಸಾಹಿತ್ಯದ ಬಗ್ಯೆ ಅಧ್ಯಯನ ಮಾಡಬೇಕು. ಕನ್ನಡದ ಕೃತಿಗಳನ್ನು ಓದುವ ಬಗ್ಯೆ ಕೀಳರಿಮೆ ಸಲ್ಲದು ಎಂದು ಅವರು ಹೇಳಿದರು.

ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಮಾತನಾಡಿ ತಮ್ಮ ಕಾಲೇಜಿನ ವತಿಯಿಂದ ಈಗಾಗಲೆ ಇನ್ನೂರು ಮಂದಿ ಸಾಹಿತಿಗಳ ವೀಡಿಯೋ ಚಿತ್ರಣ ಮಾಡಿ ಯು-ಟ್ಯೂಬ್‌ಗೆ ಅಳವಡಿಸಲಾಗಿದೆ. ಸದ್ಯದಲ್ಲಿಯೇ ಇನ್ನೂ ನೂರು ಮಂದಿ ಸಾಹಿತಿಗಳ ವೀಡಿಯೋ ಚಿತ್ರಣ ಮಾಡಲಾಗುವುದು ಎಂದರು. ಕಾಲೇಜಿನ ಕನ್ನಡ ಸಂಘದ ಚಟುವಟಿಕೆಗಳ ಬಗ್ಯೆ ಅವರು ಮೆಚ್ಚುಗೆ ವ್ಯಕ್ತ ಪಡಿಸಿದರು.

  ಖ್ಯಾತ ಲೇಖಕ ಜಯಂತ ಕಾಯ್ಕಿಣಿ ಮಾತನಾಡಿ, ಮನದ ವಿಕಾರಗಳನ್ನು ಹೋಗಲಾಡಿಸಿ ವೈಚಾರಿಕತೆಯೊಂದಿಗೆ ಧನಾತ್ಮಕ ಚಿಂತನೆ ಮೂಡಿಸುವುದೇ ಸಾಹಿತ್ಯದ ಉದ್ದೇಶವಾಗಿದೆ. ಮನೋದಾಸ್ಯ ಸಲ್ಲದು. ಸಾಹಿತ್ಯದಲ್ಲಿ ಅರ್ಥ ಮುಖ್ಯವಲ್ಲ. ಅನುಭವ ಮುಖ್ಯ. ಬದುಕಿನ ಬಗ್ಯೆ ಪ್ರೀತಿ, ಕುತೂಹಲ, ಆತ್ಮೀಯ ಸಂಬಂಧ ಇರಬೇಕು. ಸಾಹಿತ್ಯದ ಅಧ್ಯಯನಕ್ಕೆ ಮಗುವಿನಂತಹ ಮುಗ್ದ ಮತ್ತು ಮುಕ್ತ ಮನಸ್ಸು ಹಾಗೂ ಕರುಣೆಯ ದೃಷಿ ಬೇಕಾಗುತ್ತದೆ. ನಿಜವಾದ ಧರ್ಮ ಆಧ್ಯಾತ್ಮದ ಕಿಂಡಿಗಳನ್ನು ತೆರೆಯುತ್ತದೆ. ಸಾಹಿತ್ಯ, ಕಲೆ, ಸಂಸ್ಕೃತಿಯು ವೈಚಾರಿಕತೆಯೊಂದಿಗೆ ಆಧ್ಯಾತ್ಮಕ್ಕೆ ದಾರಿದೀಪವಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರೊ. ಟಿ.ಪಿ. ಅಶೋಕ, ಸಾಹಿತ್ಯದ ಅಧ್ಯಯನದಲ್ಲಿ ಅನ್ವೇಷಣೆ ಹಾಗೂ ಹೊಸ ಪ್ರಯೋಗಗಳ ನಿರಂತರ ಪ್ರಕ್ರಿಯೆ ನಡೆಯಬೇಕು. ಬೇರೆ-ಬೇರೆ ದೃಷ್ಟಿಕೋನದಿಂದ ಸಾಹಿತ್ಯದ ಅಧ್ಯಯನ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಎಸ್. ಮೋಹನ ನಾರಾಯಣ, ವಿದ್ಯಾ ಹೆಗಡೆ, ಶಿಶಿರ ಹೆಗ್ಗೋಡು ಮತ್ತು ಡಾ. ಮಾಧವ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News