×
Ad

ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಸಂಪೂರ್ಣ ನಿಷೇಧ

Update: 2017-02-14 21:26 IST

ಉಡುಪಿ, ಫೆ.14: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಪರಿಸರಕ್ಕೆ ಹಾನಿಯುಂಟು ಮಾಡುವ ಪ್ಲಾಸ್ಟಿಕ್ ವಸ್ತುಗಳ ಬಳಕೆ, ದಾಸ್ತಾನು, ಮಾರಾಟ ಹಾಗೂ ಉತ್ಪಾದನೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳು ಹಾಗೂ ದೈನಂದಿನ ಬಳಕೆಯಲ್ಲಿರುವ ಇತರೆ ಪ್ಲಾಸ್ಟಿಕ್ ವಸ್ತುಗಳು ಅಲ್ಪಾವಧಿ ಹಾಗೂ ದೀರ್ಘಾವಧಿಯಲ್ಲಿ ಪರಿಸರಕ್ಕೆ ಹಾನಿ ಮತ್ತು ಆರೋಗ್ಯಕ್ಕೆ ಅಪಾಯವನ್ನು ಉಂಟು ಮಾಡುತ್ತವೆ. ಹಾಗೂ ಪ್ಲಾಸ್ಟಿಕ್ ತ್ಯಾಜ್ಯಗಳು ಚರಂಡಿಗಳ, ಮೋರಿಗಳ ಮತ್ತು ಒಳಚರಂಡಿಗಳ ಸರಾಗ ಹರಿವಿಗೆ ತಡೆಯನ್ನು ಉಂಟು ಮಾಡುವುದರ ಜೊತೆಗೆ ನಗರ ಪ್ರದೇಶಗಳಲ್ಲಿನ ಜಲಕಾಯಗಳ ಮಾಲಿನ್ಯಕ್ಕೆ ಕಾರಣವಾಗುತ್ತದೆ.

ಪ್ಲಾಸ್ಟಿಕ್ ಸುಲಭವಾಗಿ ಕೊಳೆಯುವುದಿಲ್ಲ ಮತ್ತು ಹೆಚ್ಚು ಕಾಲ ಕಸವಾಗಿ ಉಳಿದು ಭೂಮಾಲಿನ್ಯಗೊಳಿಸುತ್ತದೆ. ಪ್ಲಾಸ್ಟಿಕ್ ಸುಟ್ಟಾಗ ಪರಿಸರಕ್ಕೆ ಹಾನಿ ಯಾಗುವ ಕ್ಯಾನ್ಸರ್‌ಗೆ ಕಾರಣವಾಗಿರುವ ಪ್ಯೂರಾನ್ಸ್ ಹಾಗೂ ಡೈ ಆಕ್ಸಿನ್ ಅನಿಲಗಳು ಬಿಡುಗಡೆಯಾಗಿ ಮಲಿನಗೊಂಡ ಗಾಳಿಯನ್ನು ಉಸಿರಾಡ ಬೇಕಾಗುತ್ತದೆ. ಹಸುಗಳು, ನಾಯಿಗಳು, ಪಕ್ಷಿ ಇತ್ಯಾದಿಗಳು ಕಸವನ್ನು ತಿನ್ನುವಾಗ ಕಸದ ಜೊತೆಗೆ ಪ್ಲಾಸ್ಟಿಕ್‌ನ್ನು ತಿನ್ನುತ್ತದೆ. ಪ್ಲಾಸ್ಟಿಕ್ ಅವುಗಳ ಅನ್ನನಾಳದ ಮುಖಾಂತರ ದೇಹವನ್ನು ಸೇರಿ ಉಸಿರುಗಟ್ಟಿಸಿ ಒಳಗೆ ಗಾಯವನ್ನುಂಟು ಮಾಡಿ ಅನೇಕ ಸಂದರ್ಭದಲ್ಲಿ ಸಾವಿಗೆ ಕಾರಣವಾಗುತ್ತದೆ.

ಆದುದರಿಂದ ಇಂತಹ ಸಮಸ್ಯೆಗಳು ಪುನರಾವರ್ತನೆಯಾಗದಂತೆ ಪರಿಣಾಮಕಾರಿಯಾಗಿ ತಡೆಯುವ ದೃಷ್ಟಿಯಿಂದ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಪರಿಸರಕ್ಕೆ ಹಾನಿಯುಂಟು ಮಾಡುವ ಪ್ಲಾಸ್ಟಿಕ್ ವಸ್ತುಗಳ ಬಳಕೆ, ದಾಸ್ತಾನು, ಮಾರಾಟ ಹಾಗೂ ಉತ್ಪಾದನೆಯನ್ನು ನಿಷೇಧಿಸಲಾಗಿದೆ.

ಪ್ಲಾಸ್ಟಿಕ್‌ನಿಂದ ತಯಾರಿಸಿದ ವಿವಿಧ ವಸ್ತುಗಳ ಬಳಕೆಯನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಹೋಟೇಲ್, ಕ್ಯಾಂಟೀನ್, ಸಭೆ ಸಮಾರಂಭಗಳಲ್ಲಿ ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News