ಮಣಿಪಾಲದ ಎರಡು ಪೊಲೀಸ್ ವಸತಿಗೃಹಕ್ಕೆ ಕನ್ನ
ಮಣಿಪಾಲ, ಫೆ.14: ಮಣಿಪಾಲದ ಪೊಲೀಸ್ ವಸತಿಗೃಹದ ಎರಡು ಮನೆಗಳಿಗೆ ಫೆ.13ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ವೌಲ್ಯದ ಸೊತ್ತುಗಳನ್ನು ಕಳವುಗೈದಿದ್ದಾರೆ. ಈ ವಸತಿಗೃಹದಲ್ಲಿ ಕಳೆದ ಒಂದು ತಿಂಗಳಲ್ಲಿ ನಡೆಯುತ್ತಿರುವ ಎರಡನೇ ಕಳ್ಳತನ ಇದಾಗಿದೆ.
ಪೊಲೀಸ್ ವಸತಿ ಗೃಹ ಬ್ಲಾಕ್ ನಂಬ್ರ 4ರಲ್ಲಿ ವಸತಿ ಗೃಹ ನಂಬ್ರ 42ರ ಬಾಗಿಲಿನ ಬೀಗದ ಕೊಂಡಿಯನ್ನು ಮುರಿದು ಒಳನುಗ್ಗಿದ ಕಳ್ಳರು ಒಟ್ಟು 157 ಗ್ರಾಂ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಕಳವು ಮಾಡಿದ್ದಾರೆ. ಇವುಗಳ ಒಟ್ಟು ಮೌಲ್ಯ 2,50,000ರೂ. ಎಂದು ಅಂದಾಜಿಸಲಾಗಿದೆ.
ನಂತರ ವಸತಿಗೃಹ ಬ್ಲಾಕ್ ನಂಬ್ರ 5ರಲ್ಲಿ ವಸತಿ ಗೃಹ ನಂಬ್ರ 56ರ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು ಒಟ್ಟು 1.625 ಕೆ.ಜಿ ತೂಕದ ಬೆಳ್ಳಿಯ ಸೊತ್ತುಗಳನ್ನು, 4,500ರೂ. ನಗದು, ಒಂದು ಮೊಬೈಲ್‌ನ್ನು ಕಳವು ಮಾಡಿದ್ದಾರೆ. ಇವುಗಳ ಒಟ್ಟು ಮೌಲ್ಯ 84,500ರೂ. ಎಂದು ಅಂದಾಜಿಸ ಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ.
ಕಳೆದ ತಿಂಗಳು ಇದೇ ದಿನ ಅಂದರೆ ಜ.14ರಂದು ವಸತಿಗೃಹದ ಬ್ಲಾಕ್ ನಂಬರ್ 6ರಲ್ಲಿರುವ ನಂಬ್ರ 66 ಮತ್ತು 67ರ ವಸತಿಗೃಹಕ್ಕೆ ನುಗ್ಗಿದ ಕಳ್ಳರು ಒಟ್ಟು 5.10ಲಕ್ಷ ರೂ. ವೌಲ್ಯದ ಕಳವು ಮಾಡಿದ್ದರು. ಆದರೆ ಈ ಪ್ರಕರಣದ ಆರೋಪಿಗಳನ್ನು ಈವರೆಗೆ ಬಂಧಿಸಿಲ್ಲ.