ಮಹಿಳಾ ಸಬಲೀಕರಣದ ಹೆಸರಿನಲ್ಲಿ ಮನುವಾದ ನಿಲ್ಲಲಿ: ಕಾ.ಜಯ ಭಾಸ್ಕರ್
ಮಂಗಳೂರು, ಫೆ. 14. ಮಹಿಳೆಯರು ಬಾಲ್ಯದಲ್ಲಿ ತಂದೆಯ ರಕ್ಷಣೆಯಲ್ಲಿ, ಯೌವನದಲ್ಲಿ ಪತಿಯ ರಕ್ಷಣೆಯಲ್ಲಿ ಹಾಗೂ ಮುಪ್ಪಿನಲ್ಲಿ ಮಕ್ಕಳ ರಕ್ಷಣೆಯಲ್ಲಿರುತ್ತಾರೆ ಎಂದು ಹೇಳಿ ಮಹಿಳೆಯರನ್ನು ಭಾವನಾತ್ಮಕವಾಗಿ ಕುಬ್ಜತೆಯಲ್ಲಿರಿಸಿ ಸಮಾಜವನ್ನು ಪುರುಷ ಪ್ರಧಾನವಾಗಿಸುವ ಮನುವಾದಿಗಳ ಕುತಂತ್ರವನ್ನು ಮಹಿಳೆಯರು ತಿಳಿಯಬೇಕು. ತನ್ನ ಕೆಲಸದ ಹಕ್ಕು ಸಂರಕ್ಷಿಸುವುದರೊಂದಿಗೆ ಸಬಲೀಕರಣಕ್ಕಾಗಿ ಮಹಿಳೆಯರು ಹೋರಾಡಬೇಕು ಎಂದು ಎಐಟಿಯುಸಿಯ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಜಯ ಭಾಸ್ಕರ್ ಕರೆ ನೀಡಿದ್ದಾರೆ.
ಇಂದು ಮಂಗಳೂರಿನ ಕೆಬಿಇಎ ಸಭಾಂಗಣದಲ್ಲಿ ಎಸ್.ಕೆ. ಬೀಡಿ ವರ್ಕರ್ಸ್ ಫೆಡರೇಶನ್ (ಎಐಟಿಯುಸಿ) ವತಿಯಿಂದ ನಡೆದ ಸಂಘಟನಾ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಬೀಡಿ ಕಾರ್ಮಿಕ ಸಂಘಟನೆಗಳು ಎಐಟಿಯುಸಿಯಡಿ ಪ್ರಬಲವಾಗಿರುವುದರಿಂದಲೇ ಇಂದು ಬೀಡಿ ಕಾರ್ಮಿಕರು ತನ್ನ ಹಕ್ಕುಗಳನ್ನು ಪಡೆಯಲು ಸಾಧ್ಯವಾಯಿತು. ಆದರೆ ಬೀಡಿ ಕೆಲಸದಿಂದ ಉನ್ನತ ಜೀವನ ಗಳಿಸಿರುವ ಕಾರ್ಮಿಕರ ಮಕ್ಕಳು ಕೈಗಾರಿಕೆಯ ಉಳುವಿಗಾಗಿ ಸಹಕರಿಸದೆ ಕೈಗಾರಿಕಾ ವಿರೋಧಿ ನಿಲುವು ಹೊಂದಿದ್ದಾರೆ. ದೇಶ ಪ್ರೇಮದ ಹೆಸರಿನಲ್ಲಿ ಯುವ ಜನಾಂಗವನ್ನು ದಾರಿ ತಪ್ಪಿಸಲಾಗುತ್ತಿದೆ. ಬೀಡಿ ಕಾರ್ಮಿಕರಿಗೆ ಕೆಲಸದ ಬದಲಿ ವ್ಯವಸ್ಥೆ ಮಾಡದೆ ಅನಾರೋಗ್ಯದ ನೆಪ ಒಡ್ಡಿ ಸಾಂಪ್ರದಾಯಿಕ ಗುಡಿ ಕೈಗಾರಿಕೆಯಾಗಿರುವ ಬೀಡಿ ಕೈಗಾರಿಕೆಯನ್ನು ಮುಗಿಸಲು ಕುತಂತ್ರ ಹೆಣೆಯಲಾಗುತ್ತಿದೆ. ಈ ಕುತಂತ್ರವನ್ನು ಹಿಮ್ಮೆಟ್ಟಿಸಲು ಮಳಾ ಕಾರ್ಮಿಕರು ಚಳವಳಿಗೆ ಧುಮುಕಬೇಕು ಎಂದು ಅವರು ಕರೆ ನೀಡಿದರು.
ಸಮಾವೇಶದ ಅಧ್ಯಕ್ಷತೆಯನ್ನು ಪಿ. ಸಂಜೀವ ವಹಿಸಿದ್ದರು. ಸಿಪಿಐ ದ.ಕ. ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್, ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಎಚ್. ರಾವ್, ಸಂಘಟನೆಗಳ ನಾಯಕರಾದ ಬಿ. ಶೇಖರ್, ಕೆ. ಭಟ್, ಸುಲೋಚನಾ, ಸರಸ್ವತಿ, ಗ್ಲಾಡಿ ಡಿಸೋಜ, ಸೆಲಿಮತ್, ಅಪ್ಪಿ, ಸುರೇಶ ಕುಮಾರ್, ಬಿ.ಎಂ. ಹಸೈನಾರ್, ಎಸ್. ಚಂದಪ್ಪ ಅಂಚನ್ ಮುಂತಾದವರು ಸಾಂದರ್ಭಿಕವಾಗಿ ಮಾತನಾಡಿದರು.
ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ .ಎಸ್. ಬೇರಿಂಜ ಸ್ವಾಗತಿಸಿದರು. ಈ ಸಂದರ್ಭದಲ್ಲಿ ವರದಿ ಹಾಗೂ ಲೆಕ್ಕಪತ್ರವನ್ನು ಮಂಡಿಸಲಾಯಿತು. ವರದಿಯ ಮೇಲೆ ಚರ್ಚೆ ನಡೆಯಿತು. ಬೀಡಿ ಕೈಗಾರಿಕೆ, ಸಾಮೂಹಿಕ ಸಮಸ್ಯೆ ಹಾಗೂ ಬೇಡಿಕೆಗಳ ಬಗ್ಗೆ ನಿರ್ಣಯಗಳನ್ನು ಅಂಗೀಕರಿಸಲಾಯಿತು.
ಈ ಸಂದರ್ಭದಲ್ಲಿ ಸಮಾವೇಶ 39 ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಪಿ. ಸಂಜೀವ, ಉಪಾಧ್ಯಕ್ಷರಾಗಿ -ಕೆ.ವಿ.ಭಟ್, ಬಿ.ಎಂ ಹಸೈನಾರ್ ಮತ್ತು ಸರೋಜಿನಿ ಎಸ್., ಪ್ರಧಾನ ಕಾರ್ಯದರ್ಶಿಯಾಗಿ ವಿ.ಎಸ್.ಬೇರಿಂಜ, ಕಾರ್ಯದರ್ಶಿಗಳಾಗಿ ಸುರೇಶ್ ಕುಮಾರ್ ಬಂಟ್ವಾಳ್, ಕರುಣಾಕರ್ ಎಂ., ರಾಮಣ್ಣ ರೈ, ಸುಲೋಚನಾ ಹಾಗೂ ಕೋಶಾಧಿಕಾರಿಯಾಗಿ ಬಿ. ಶೇಖರ್ ಆಯ್ಕೆಗೊಂಡರು.