5,000ಕ್ಕೂ ಹೆಚ್ಚು ಶಾಖೆಗಳು: ಕೇರಳದಲ್ಲಿ ಬಲ ವರ್ಧಿಸಿಕೊಳ್ಳುತ್ತಿರುವ ಆರೆಸ್ಸೆಸ್
ಹೊಸದಿಲ್ಲಿ, ಫೆ.14: ಎಡ ಪಕ್ಷದ ಆಡಳಿತದಲ್ಲಿರುವ ಕೇರಳ ರಾಜ್ಯದಲ್ಲಿ ಅತ್ಯಂತ ಹೆಚ್ಚು ಆರೆಸ್ಸೆಸ್ ಶಾಖೆ ನಡೆಯುತ್ತಿದ್ದು (ಪ್ರತೀ ದಿನ 5 ಸಾವಿರಕ್ಕೂ ಹೆಚ್ಚು) ಶಾಖೆಗಳ ಸಂಖ್ಯೆ ಇನ್ನಷ್ಟು ವೃದ್ಧಿಸುತ್ತಿದೆ ಎಂದು ಸಂಘ ಪರಿವಾರದ ಪದಾಧಿಕಾರಿಯೋರ್ವರು ತಿಳಿಸಿದ್ದಾರೆ. ಒಂದು ಪ್ರದೇಶದ ಸಂಘ ಸದಸ್ಯರು ಬೆಳಗ್ಗೆ ಒಟ್ಟು ಸೇರಿ ನಡೆಸುವ ಚಟುವಟಿಕೆ ಮತ್ತು ಸಭೆಗೆ ಶಾಖೆ ಎಂದು ಕರೆಯಲಾಗುತ್ತದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಮತ್ತು ಬಿಜೆಪಿಯ ಭದ್ರಕೋಟೆ ಎನಿಸಿರುವ ಗುಜರಾತ್‌ನಲ್ಲಿ ನಡೆಯುವ ಶಾಖೆಗಳು ಸುಮಾರು 1,000 ಮಾತ್ರ. ಕೇರಳದಲ್ಲಿ ಆರೆಸ್ಸೆಸ್ ಕಡೆ ಒಲವು ತೋರುತ್ತಿರುವವರ ಸಂಖ್ಯೆ ದಿನೇ ದಿನೇ ವೃದ್ಧಿಸುತ್ತಿದ್ದು ಎಡಪಕ್ಷಗಳು ನಿಧಾನವಾಗಿ ತಮ್ಮ ಹಿಡಿತ ಕಳೆದುಕೊಳ್ಳುತ್ತಿವೆ. ಕಳೆದ ಕೆಲ ವರ್ಷಗಳಿಂದ ಕೇರಳದಲ್ಲಿ ಆರೆಸ್ಸೆಸ್ ಶಾಖೆಗಳು ಹೆಚ್ಚಿವೆ. ಈ ಕಾರಣದಿಂದಲೇ ನಮ್ಮ ಕಾರ್ಯಕರ್ತರ ಮೇಲೆ ಆ ರಾಜ್ಯದಲ್ಲಿ ಆಕ್ರಮಣ ಹೆಚ್ಚಿದೆ ಎಂದು ಆರೆಸ್ಸೆಸ್ ಅಖಿಲ ಭಾರತೀಯ ಸಹ ಪ್ರಚಾರ ಪ್ರಮುಖ್ ನಂದಕುಮಾರ್ ಪಿಟಿಐಗೆ ತಿಳಿಸಿದ್ದಾರೆ. ಸಂಘದ ಬಗ್ಗೆ ಯುವಜನರಲ್ಲಿ ಹೆಚ್ಚುತ್ತಿರುವ ಆಸಕ್ತಿ ಈ ಹೆಚ್ಚಳಕ್ಕೆ ಕಾರಣವಾಗಿದೆ. ಪ್ರಧಾನಿ ಮೋದಿ ಅಧಿಕಾರಕ್ಕೆ ಬರುವುದಕ್ಕಿಂತಲೂ ಮೊದಲು, ಅಂದರೆ 2011ರಿಂದಲೇ ಈ ಹೆಚ್ಚಳ ದಾಖಲಾಗಿದೆ ಎಂದವರು ತಿಳಿಸಿದ್ದಾರೆ. ತನ್ನ ಕಾರ್ಯ ಚಟುವಟಿಕೆಗೆ ಅನುಕೂಲವಾಗುವ ದೃಷ್ಟಿಯಿಂದ ಉತ್ತರಪ್ರದೇಶದಲ್ಲಿ ಆರೆಸ್ಸೆಸ್ ಅನ್ನು 6 ಪ್ರಾಂತಗಳೆಂದು ವಿಭಾಗಿಸಲಾಗಿದೆ. ಎಲ್ಲಾ ಪ್ರಾಂತಗಳಲ್ಲಿ ಒಟ್ಟಾರೆ ದಿನವೊಂದಕ್ಕೆ 8 ಸಾವಿರ ಶಾಖೆಗಳು ನಡೆಯುತ್ತವೆ. ಮಹಾರಾಷ್ಟ್ರವನ್ನು ನಾಲ್ಕು ಪ್ರಾಂತಗಳೆಂದು ವಿಭಾಗಿಸಲಾಗಿದ್ದು, ಇಲ್ಲಿ ದಿನವೊಂದಕ್ಕೆ 4 ಸಾವಿರ ಶಾಖೆಗಳು ನಡೆಯುತ್ತವೆ. ದೇಶದಾದ್ಯಂತ ಕಾರ್ಯಕರ್ತರ ಸಂಖ್ಯೆಯನ್ನು 1 ಲಕ್ಷಕ್ಕೆ ಹೆಚ್ಚಿಸಲು ಆರೆಸ್ಸೆಸ್ ಯೋಚಿಸಿದ್ದು ಈ ನಿಟ್ಟಿನಲ್ಲಿ ಸ್ವಯಂ ಸೇವಕರ ಸಮವಸ್ತ್ರದಲ್ಲಿ ಬದಲಾವಣೆ ತಂದು ಚಡ್ಡಿಯ ಬದಲು ಪ್ಯಾಂಟ್ ಧರಿಸುವ ನಿಯಮ ರೂಪಿಸುವ ಮೂಲಕ ಯುವಜನರನ್ನು ಆಕರ್ಷಿಸುವ ಇರಾದೆಯಲ್ಲಿದೆ.