×
Ad

ಫೆ.18: ‘ಸುನ್ನಿ ಸಂದೇಶ’ ವಾರ್ಷಿಕೋತ್ಸವ

Update: 2017-02-15 17:25 IST

ಮಂಗಳೂರು, ಫೆ.15: ಕರ್ನಾಟಕ ಇಸ್ಲಾಮಿಕ್ ಸಾಹಿತ್ಯ ಅಕಾಡಮಿ (ಕೆಐಎಸ್‌ಎ) ಯ ಅಧೀನದಲ್ಲಿರುವ ಸುನ್ನಿ ಸಂದೇಶ ಮಾಸ ಪತ್ರಿಕೆಯ 15ನೆ ವಾರ್ಷಿಕೋತ್ಸವವು ನಗರದ ನೆಹರೂ ಮೈದಾನದಲ್ಲಿ ಫೆ.18ರಂದು ಸಂಜೆ 6 ಗಂಟೆಗೆ ನಡೆಯಲಿದೆ ಎಂದು ಸುನ್ನಿ ಸಂದೇಶ ಮಾಸ ಪತ್ರಿಕೆಯ ಪ್ರಧಾನ ಸಂಪಾದಕ ಹಾಜಿ ಕೆ.ಎಸ್. ಹೈದರ್ ದಾರಿಮಿ ತಿಳಿಸಿದರು.

 ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾದಕ ದ್ರವ್ಯದ ವಿರುದ್ಧ ಯುವ ಜನಾಂಗಕ್ಕೆ ಅರಿವು ಮೂಡಿಸಲು ‘ಲಹರಿ ಮುಕ್ತ ಸಮಾಜ’ದ ವಿರುದ್ಧ ಆಂದೋಲನದ ಭಾಗವಾಗಿ ಅಂತಾರಾಷ್ಟ್ರೀಯ ವಾಗ್ಮಿ ಎ.ಎಂ. ನೌಷಾದ್ ಬಾಖವಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದರು.

ವಾರ್ಷಿಕೋತ್ಸವ ಕಾರ್ಯಕ್ರಮವನ್ನು ದ.ಕ. ಜಿಲ್ಲಾ ಖಾಝಿ ಶೈಖುನಾ ತ್ವಾಕಾ ಅಹ್ಮದ್ ಮುಸ್ಲಿಯಾರ್ ಉದ್ಘಾಟಿಸಲಿದ್ದಾರೆ. ಶೈಖುನಾ ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲ್ ದುಆಆಶೀರ್ವಚನ ನೀಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಸ್ವಾಗತ ಸಮಿತಿ ಅಧ್ಯಕ್ಷ ಎ.ಎನ್. ನೌಷಾದ್ ಹಾಜಿ ಸೂರಲ್ಪಾಡಿ ವಹಿಸಲಿದ್ದಾರೆ. ಸ್ವಾಗತ ಸಮಿತಿ ಗೌರವಾಧ್ಯಕ್ಷ ಹಾಜಿ ಝುಕರಿಯಾ ಅಲ್ ಮುಝೈನ್ ಜೋಕಟ್ಟೆ ಸ್ವಾಗತಿಸಲಿದ್ದಾರೆ ಎಂದು ಹೇಳಿದರು.

 ‘ಕಿಸಾ’ದ ಕಾರ್ಯ ಚಟುವಟಿಕೆಯು ಅಕ್ಷರರಂಗಕ್ಕೆ ಸೀಮಿತಗೊಳ್ಳದೆ ಇತರ ಕ್ಷೇತ್ರಗಳಲ್ಲೂ ಸಹಾಯ ಹಸ್ತ ನೀಡಿದೆ. ಮೂಳೂರಿನಲ್ಲಿ ಜಿಲ್ಲಾ ಮಟ್ಟದ ವಿದ್ಯಾರ್ಥಿ ಕಲಾ ಸಾಹಿತ್ಯ ಸ್ಪರ್ಧೆಗಳನ್ನು ಸಂಸ್ಥೆ ವತಿಯಿಂದ ಆಯೋಜಿಸಲಾಗಿತ್ತು. ಪ್ರತಿ ವರ್ಷ ಇಫ್ತಾರ್ ಕೂಟ, ಸೌಹಾರ್ದ ಮಿಲನ, ರಕ್ತದಾನ ಶಿಬಿರ, ಏಡ್ಸ ರೋಗಿಗಳ ಜತೆ ಸ್ನೇಹ ಸಂಗಮ ಮೊದಲಾದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ ಎಂದು ತಿಳಿಸಿದರು.

ಅಲ್‌ಮುಝೈನ್ ಗ್ರೂಪ್ ಅಧ್ಯಕ್ಷ ಹಾಜಿ ಝುಕರಿಯಾ ಜೋಕಟ್ಟೆ ಮಾತನಾಡಿ, ಇಸ್ಲಾಮಿನ ಸಂದೇಶವನ್ನು ರಾಜ್ಯಾದ್ಯಂತ ತಲುಪಿಸುವ ಪ್ರಯತ್ನ ಮಾಡಲಾಗುವುದು. ಉತ್ತರ ಕರ್ನಾಟಕ ಭಾಗಕ್ಕೆ ದಾಅ್ವಾ ತಂಡವನ್ನು ಕಳುಹಿಸುವ ಕಾರ್ಯಗಳಿಗೆ ಚಾಲನೆ ಹಾಗೂ ಮಸೀದಿ-ಮದ್ರಸ ಸ್ಥಾಪನೆ ಮಾಡಲಾಗುವುದು. ಕಿಡ್ನಿ ವೈಫಲ್ಯದಿಂದ ಬಳಲುವ ಬಡವರಿಗೆ ಡಯಾಲಿಸೀಸ್‌ಗೆ ಹಾಗೂ ಕ್ಯಾನ್ಸರ್ ಸಹಿತ ಮಾರಕ ರೋಗ ಪೀಡಿತರಿಗೆ ಸಹಾಯ ನೀಡಲಾಗುವುದು ಎಂದರು.

ಸುಸಜ್ಜಿತ ಮತ್ತು ಕ್ರಮಬದ್ಧ ಇಸ್ಲಾಮಿಕ್ ಶಿಕ್ಷಣದ ಜತೆ ಶಾಲಾ ವಿದ್ಯಾಭ್ಯಾಸ ನೀಡುವ ಅತ್ಯಾಧುನಿಕ ಸೌಕರ್ಯ ಹೊಂದಿರುವ ಶಿಕ್ಷಣ ಕೇಂದ್ರ ಸ್ಥಾಪನೆಗೆ ಶ್ರಮಿಸಲಾಗುವುದು. ಕೋಮು ಸೌಹಾರ್ದ ಮೂಡಿಸುವಲ್ಲಿ ಸ್ನೇಹ ಸ್ನೇಹ ಮಿಲನ ಕಾರ್ಯಕ್ರಮಗಳು, ಬಡ ಹಾಗೂ ಅನಾಥ ಹೆಣ್ಣು ಮಕ್ಕಳ ಸಾಮೂಹಿಕ ಮದುವೆ ನಡೆಸಿಕೊಡಲಾಗುವುದು. ನಿರುದ್ಯೋಗಿಗಳಿಗೆ ಸ್ವ ಉದ್ಯೋಗಕ್ಕೆ ಸಹಾಯ ಮತ್ತು ಪ್ರೇರಣೆ ನೀಡಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಎ.ಎಚ್. ನೌಷಾದ್ ಹಾಜಿ ಸೂರಲ್ಪಾಡಿ, ಕೋಶಾಧಿಕಾರಿ ಹಾಜಿ ಸಿತಾರ್ ಅಬ್ದುಲ್ ಮಜೀದ್, ಸ್ವಾಗತ ಸಮಿತಿಯ ಸಂಚಾಲಕ ಮುಸ್ತಫಾ ಫೈಝಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News