×
Ad

ಪ್ರತಿಯೊಬ್ಬರು ಆರೋಗ್ಯದ ಶಿಕ್ಷಕರಾಗಲಿ: ಡಾ.ಚಂದ್ರಶೇಖರ್

Update: 2017-02-15 17:35 IST

ಉಡುಪಿ, ಫೆ.15: ಪ್ರತಿಯೊಬ್ಬರಿಗೆ ಆರೋಗ್ಯದ ಕುರಿತು ಅರಿವು ಮೂಡಿ ಸುವುದರೊಂದಿಗೆ ಆರೋಗ್ಯ ಶಿಕ್ಷಕರನ್ನಾಗಿಸುವ ಮೂಲಕ ಆರೋಗ್ಯಕರ ಸಮಾಜ ಕಟ್ಟಲು ಸಾಧ್ಯವಾಗುತ್ತದೆ ಎಂದು ಉಡುಪಿ ಆದರ್ಶ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಜಿ.ಎಸ್.ಚಂದ್ರಶೇಖರ್ ಹೇಳಿದ್ದಾರೆ.

ಮಂಗಳೂರು ವಿವಿ ರಾಷ್ಟ್ರೀಯ ಸೇವಾ ಯೋಜನೆ, ಮಂಗಳೂರು ಯೆನಪೋಯ ವಿವಿ, ಉಡುಪಿ ಪೂರ್ಣಪ್ರಜ್ಞ ಸಂಧ್ಯಾ ಮತ್ತು ಪೂರ್ಣಪ್ರಜ್ಞ ಕಾಲೇಜುಗಳ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು, ಉಡುಪಿ ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ಸಹಯೋಗದೊಂದಿಗೆ ಬುಧವಾರ ಉಡುಪಿ ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ಎನ್‌ಎಸ್‌ಎಸ್ ಸ್ವಯಂ ಸೇವಕರಿಗೆ ಹಮ್ಮಿಕೊಳ್ಳಲಾದ ಕ್ಯಾನ್ಸರ್ ರೋಗ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

ಇಂದಿನ ಜೀವನ ಶೈಲಿಯ ಬದಲಾವಣೆಯಿಂದ ಭಾರತದಲ್ಲಿ ಬೊಜ್ಜು, ಮಧುಮೇಹ, ಅಧಿಕ ರಕ್ತದೊತ್ತಡದಂತಹ ಕಾಯಿಲೆಗಳು ಹೆಚ್ಚಾಗುತ್ತಿವೆ. ನಮ್ಮಲ್ಲಿ ಪ್ರತಿ ಬಾರಿ ಆರೋಗ್ಯ ತಪಾಸಣೆ ಮಾಡುವವರ ಸಂಖ್ಯೆ ತೀರಾ ಕಡಿಮೆ. ಈ ಸಂಬಂಧ ಜನರಲ್ಲಿ ಆರೋಗ್ಯ ಅರಿವು ಮೂಡುವವರೆಗೆ ಆರೋಗ್ಯಕರ ಸಮಾಜ ನಿರ್ಮಿಸಲು ಆಗಲ್ಲ ಎಂದರು.

ಕ್ಯಾನ್ಸರ್ ಕಾಯಿಲೆಗಳಿಗೆ ಮುಖ್ಯ ಕಾರಣ ಮದ್ಯ, ತಂಬಾಕು ಹಾಗೂ ಮಾದಕ ದ್ರವ್ಯ. ಇದರಿಂದ ದೂರ ಇರುವುದರಿಂದ ಕ್ಯಾನ್ಸರ್ ತಡೆಗಟ್ಟ ಬಹುದು. ಎಲ್ಲ ರೀತಿಯ ಕ್ಯಾನ್ಸರನ್ನು ಆರಂಭದ ಹಂತದಲ್ಲಿ ಸಂಪೂರ್ಣ ಗುಣ ಮಾಡಬಹುದು. ಅದಕ್ಕೆ ಆರೋಗ್ಯದ ತಪಾಸಣೆಯನ್ನು ಮಾಡಬೇಕು ಎಂದು ಅವರು ತಿಳಿಸಿದರು.

 ಕಾರ್ಯಕ್ರಮವನ್ನು ಉದ್ಘಾಟಿಸಿದ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ಆಡಳಿತ ಮಂಡಳಿಯ ಕಾರ್ಯದರ್ಶಿ ಪ್ರದೀಪ್ ಕುಮಾರ್ ಮಾತನಾಡಿ, ಆರೋಗ್ಯ ನಮ್ಮ ಮೂಲಭೂತ ಹಕ್ಕು. ಆರೋಗ್ಯ ಹಾಗೂ ವೈದ್ಯಕೀಯ ಚಿಕಿತ್ಸೆಗೆ ಸಂಬಂಧಿಸಿ ಕಾನೂನು ತಿದ್ದುಪಡಿ ಮಾಡಿ ವೈದ್ಯರಿಗೆ ವಿಶೇಷ ಅಧಿಕಾರವನ್ನು ನೀಡಲಾಗಿದೆ. ಅಜ್ಞಾನ ಮತ್ತು ಅನಾರೋಗ್ಯ ಈ ದೇಶದ ಎರಡು ಬಹಳ ದೊಡ್ಡ ಶತ್ರುಗಳು. ಅಜ್ಞಾನದಿಂದಾಗಿ ನಮ್ಮಲ್ಲಿ ಅನಾರೋಗ್ಯ ಹೆಚ್ಚಾಗುತ್ತಿದೆ ಎಂದರು.

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಗದೀಶ್ ಶೆಟ್ಟಿ ವಹಿಸಿ ದ್ದರು. ಯೆನಪೋಯ ಮೆಡಿಕಲ್ ಕಾಲೇಜಿನ ಡಾ.ಇಬ್ರಾಹಿಂ ನಾಗನೂರು, ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಸುಕನ್ಯಾ ಮೇರಿ, ಯೆನಪೋಯ ಆಸ್ಪತ್ರೆ ವೈದ್ಯರಾದ ಡಾ.ಇಮ್ರಾನ್ ಪಾಷ, ಡಾ.ರೇಷ್ಮಾ, ಮಂಗಳೂರು ವಿವಿ ಎನ್ನೆಸ್ಸೆಸ್ ಅಧಿಕಾರಿ ಅಶ್ವಿನಿ, ಸಂಧ್ಯಾ ಕಾಲೇಜಿನ ಯೋಜನಾಧಿಕಾರಿ ರಮಾನಂದ ರಾವ್ ಉಪಸ್ಥಿತರಿದ್ದರು.

ಪಿಪಿಸಿಯ ಎನ್‌ಎಸ್‌ಎಸ್ ಯೋಜನಾಧಿಕಾರಿ ಬಾಲರಾಜ್ ಡಿ.ಬಿ. ಸ್ವಾಗತಿಸಿದರು. ಯೋಜನಾಧಿಕಾರಿ ಮಲ್ಲಿಕಾ ವಂದಿಸಿದರು. ಸೌಮ್ಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News