×
Ad

ಭಾವಿ ವಧು ಆತ್ಮಹತ್ಯೆಯ ಬೆನ್ನಲ್ಲೇ ವರನೂ ಆತ್ಮಹತ್ಯೆ

Update: 2017-02-15 19:06 IST

  ಕಾಸರಗೋಡು/ ಮಂಗಳೂರು, ಫೆ.15: ಭಾವೀ ವಧು ಆತ್ಮಹತ್ಯೆಗೈದ ವಾರದ ಬಳಿಕ ವರನೂ ಜಾಹೀರಾತು ಫಲಕಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಸರಗೋಡಿನಲ್ಲಿ ಬುಧವಾರ ನಡೆದಿದೆ.

ಮಂಗಳೂರಿನ ನಾಗುರಿ ಸಮೀಪದ ಕೃಷ್ಣ ಎಂಬವರ ಮಗಳು ನಂದಿತಾ (26) ಮತ್ತು ಕಾಸರಗೋಡು ದೇಳಿ ಆರಾಮಂಗಾನದ ಚಂದ್ರಶೇಖರ (37) ಎಂಬವರ ವಿವಾಹವನ್ನು ಫೆ.13ರಂದು ನಡೆಸಲು ನಿರ್ಧರಿಸಲಾಗಿತ್ತು.

ಈ ಮಧ್ಯೆ ಫೆ.8ರಂದು ನಂದಿತಾ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡರೆ, ಚಂದ್ರಶೇಖರ ಫೆ.15ರಂದು ಕಾಸರಗೋಡು ಜಂಕ್ಷನ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಫೆ.8ರಂದು ಮಧ್ಯಾಹ್ನ 1:05ರಿಂದ ಸಂಜೆ 4:10ರ ಮಧ್ಯೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಟೈಲರಿಂಗ್ ವೃತ್ತಿಯಲ್ಲಿದ್ದ ನಂದಿತಾ ಆತ್ಮಹತ್ಯೆಗೈದಿದ್ದರು. ಆತ್ಮಹತ್ಯೆಗೆ ಸ್ಪಷ್ಟಕಾರಣ ತಿಳಿದು ಬಂದಿಲ್ಲವಾದರೂ ಭಾವೀ ವರ ಮತ್ತಾತನ ಮನೆಯವರು ನೀಡಿದ ಮಾನಸಿಕ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಶಂಕಿಸಲಾಗಿದೆ. ಈ ಬಗ್ಗೆ ನಂದಿತಾಳ ತಂದೆ ಕೃಷ್ಣ ಆರೋಪಿ ಚಂದ್ರಶೇಖರ ಮತ್ತಾತನ ಮನೆಯವರ ವಿರುದ್ಧ ಕಂಕನಾಡಿ ನಗರ ಠಾಣೆಗೆ ದೂರು ನೀಡಿದ್ದಾರೆ.

ಈ ಮಧ್ಯೆ ಭಾವೀ ವರ ಚಂದ್ರಶೇಖರನು ಚಳಿಯಂಗೋಡು ಬಳಿ ಜಾಹೀರಾತು ಬೋರ್ಡ್‌ನಲ್ಲಿ ನೇಣುಬಿಗಿದು ಆತ್ಮಹತ್ಯೆಗೈದಿರುವುದು ್ರಕರಣಕ್ಕೆ ವಿಚಿತ್ರ ತಿರುವು ಸಿಕ್ಕಿದೆ.

  ಮಂಗಳವಾರ ರಾತ್ರಿ ಚೆಮ್ನಾಡ್‌ಗೆ ಹೋಗಿ ಬರುವೆ ಎಂದು ಹೇಳಿ ಮನೆಯಿಂದ ಹೊರಟಿದ್ದ ಚಂದ್ರಶೇಖರ ಬಳಿಕ ಮನೆಗೆ ಮರಳಿರಲಿಲ್ಲ. ಮನೆಯವರು ಮೊಬೈಲ್ ಸಂಪರ್ಕಿಸಿದರೂ ಸ್ವಿಚ್ಡ್ಆಫ್ ಆಗಿತ್ತು. ಈ ನಡುವೆ ಬುಧವಾರ ಬೆಳಗ್ಗೆ ಚಲಿಯಂಗೋಡು ಜಂಕ್ಷನ್ ಬಳಿ ಜಾಹೀರಾತು ಫಲಕಕ್ಕೆ ನೇಣುಬಿಗಿದು ಯುವಕನೋರ್ವ ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದು, ಮನೆಯವರು ಆಗಮಿಸಿ ಗುರುತು ಪತ್ತೆ ಹಚ್ಚಿದರು. ಬೇಕಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ನಂದಿತಾ ಆತ್ಮಹತ್ಯೆಯ ಬಳಿಕ ಆಕೆಯ ಹೆತ್ತವರ ಪರವಾಗಿ ಓಡಾಡಿಕೊಂಡಿದ್ದ ಮಾಜಿ ಕಾರ್ಪೊರೇಟರೊಬ್ಬರ ವಿರುದ್ಧ ಚಂದ್ರಶೇಖರನ ಮನೆಯವರು ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News