ಎಂಡೋ ಬಾಧಿತರಿಗೆ ಶಾಶ್ವತ ಪುನರ್ವಸತಿ ಕೇಂದ್ರ : ಪ್ರಮೋದ್ ಮಧ್ವರಾಜ್
ಉಡುಪಿ, ಫೆ.15: ಜಿಲ್ಲೆಯಲ್ಲಿ ಎಂಡೋಸಲ್ಫಾನ್‌ನಿಂದ ಬಾಧಿತರಾಗಿರು ವವರಿಗೆ ಶಾಶ್ವತ ಪುನರ್ವಸತಿ ಕೇಂದ್ರ ಸ್ಥಾಪಿಸಲು 7.50 ಕೋಟಿ ರೂ. ವೆಚ್ಚದ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಮಣಿಪಾಲದಲ್ಲಿರುವ ಜಿಪಂ ಸಭಾಂಗಣದಲ್ಲಿ ಬುಧವಾರ ನಡೆದ ಎಂಡೋ ಸಲ್ಫಾನ್ ಸಾಮಾನ್ಯ ಸಮಿತಿಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಎಂಡೋ ಬಾಧಿತರಿಗಾಗಿ ಶಾಶ್ವತ ಪುನರ್ವಸತಿ ಕೇಂದ್ರ ಪ್ರಾರಂಭಿಸಲು ಐದು ಎಕರೆ ಜಾಗದ ಅವಶ್ಯಕತೆಯಿದ್ದು, ಜಿಲ್ಲೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಎಂಡೋ ಬಾಧಿತರಿರುವ ಕುಂದಾಪುರ ತಾಲೂಕಿನಲ್ಲಿ ಕೇಂದ್ರ ಪ್ರಾರಂಭಿಸುವಂತೆ ಸಲಹೆ ನೀಡಿದ ಸಚಿವರು, ಇದಕ್ಕಾಗಿ ಅಗತ್ಯ ಜಾಗವನ್ನು ಗುರುತಿಸುವಂತೆ ಬೈಂದೂರು ತಹಶೀಲ್ದಾರರಿಗೆ ಸೂಚಿಸಿದರು.
ಬೈಂದೂರು ವಲಯದ ಕೆಲವು ಶಾಲೆಗಳಲ್ಲಿ 10ಕ್ಕಿಂತ ಹೆಚ್ಚು ಎಕರೆ ಜಾಗವಿದ್ದು, ಅಂತಹ ಶಾಲೆಗಳಲ್ಲಿ ಲಭ್ಯವಿರುವ ಪ್ರದೇಶದ ಕುರಿತು ಮಾಹಿತಿ ನೀಡುವಂತೆ ಡಿಡಿಪಿಐ ಅವರಿಗೆ ಸಚಿವರು ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಎಂಡೋ ಬಾಧಿತರಿಗೆ ಸವಲತ್ತುಗಳನ್ನು ವಿತರಿಸುವಾಗ ಎಲ್ಲಾ ಇಲಾಖೆಗಳುಸಮನ್ವಯದಿಂದ ಕಾರ್ಯ ನಿರ್ವಹಿಸುವಂತೆ ಸೂಚಿಸಿದ ಸಚಿವರು, ಎಂಡೋಪೀಡಿತರನ್ನು ಗುರುತಿಸುವಾಗ ಮತ್ತು ಸವಲತ್ತುಗಳನ್ನು ವಿತರಿಸುವಾಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನುಸರಿಸಿರುವ ಮಾನದಂಡಗಳನ್ನು ಅನುಸರಿಸುವಂತೆ ತಿಳಿಸಿದರು.
ಅರ್ಹ ಫಲಾನುಭವಿ ವಂಚಿತನಾಗದಂತೆ,ಸಮೀಕ್ಷೆಯಲ್ಲಿ ಬಿಟ್ಟು ಹೋಗಿರುವ ಗ್ರಾಮಗಳ ಸಮೀಕ್ಷೆಗೆ ಕ್ರಮ ಕೈಗೊಳ್ಳಿ. ಮಾಸಾಶನ ಕುರಿತು ಸಲ್ಲಿಕೆಯಾಗಿರುವ ಅರ್ಜಿಗಳನ್ನು ಶೀಘ್ರದಲ್ಲಿ ಇತ್ಯರ್ಥಪಡಿಸಿ, ಎಂಡೋ ಬಾಧಿತರಿಗೆ ಬಸ್‌ಪಾಸ್ ವಿತರಿಸುವ ಕುರಿತಂತೆ ಕ್ರಮ ಕೈಗೊಳ್ಳಿ. ಈ ಬಾರಿ ಬಜೆಟ್‌ನಲ್ಲಿ ವಿಕಲಚೇತನ ರಿಗೆ ಹಲವು ಸೌಲ್ಯಗಳನ್ನು ಕಲ್ಪಿಸಲಾಗುತ್ತಿದ್ದು, ಅಗತ್ಯ ಬೇಡಿಕೆಗಳ ಕುರಿತು ಸಂಘ ಸಂಸ್ಥೆಗಳು ಮನವಿಯನ್ನು ನೀಡುವಂತೆ ಸಚಿವರು ತಿಳಿಸಿದರು.
ಜಿಲ್ಲೆಯಲ್ಲಿ ಬಿಟ್ಟುಹೋದ ಎಂಡೋ ಬಾಧಿತರಿಗಾಗಿ 28 ಶಿಬಿರಗಳನ್ನು ನಡೆಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಪ್ರಾರಂಭದಲ್ಲಿ ಒಟ್ಟು 1328 ಎಂಡೋ ಬಾಧಿತರನ್ನು ಗುರುತಿಸಲಾಗಿದ್ದು, ಇವರಲ್ಲಿ 33 ಮಂದಿ ಈಗಾಗಲೇ ಮೃತ ಪಟ್ಟಿದ್ದಾರೆ. ಪ್ರಸ್ತುತ 1295 ಮಂದಿಗೆ ಮಾಸಾಶನ ವಿತರಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೋಹಿಣಿ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾದ್ಯಕ್ಷೆ ಶೀಲಾ ಕೆ. ಶೆಟ್ಟಿ, ಸಿಇಓ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಕುಂದಾಪುರ ಉಪ ವಿಭಾಗಾಧಿಕಾರಿ ಶಿಲ್ಪಾನಾಗ್, ಅಪರ ಜಿಲ್ಲಾಧಿಕಾರಿ ಅನುರಾಧ ಹಾಗೂ ಜಿಲ್ಲೆಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸ್ವಯಂಸೇವಾ ಸಂಘಟನೆಗಳ ಪ್ರತಿನಿಧಿ ಗಳು ಉಪಸ್ಥಿತರಿದ್ದರು.