ಪತಿಯ ಯೋಗಕ್ಷೇಮದ ಬಗ್ಗೆ ನ್ಯಾಯಾಲಯದಲ್ಲಿ ತೃಪ್ತಿ ವ್ಯಕ್ತಪಡಿಸಿದ ಬಿಎಸ್‌ಎಫ್ ಯೋಧನ ಪತ್ನಿ
ಹೊಸದಿಲ್ಲಿ,ಫೆ.15: ತನ್ನ ಪತಿಯನ್ನು ಭೇಟಿಯಾದ ಬಳಿಕ ಅವರ ಯೋಗಕ್ಷೇಮದ ಬಗ್ಗೆ ತನಗೆ ಸಮಾಧಾನವಾಗಿದೆ ಎಂದು ಪಡೆಯಲ್ಲಿ ಕಳಪೆ ಆಹಾರದ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಪೋಸ್ಟ್ ಮಾಡಿ ದೇಶಾದ್ಯಂತ ಸಂಚಲನ ಮೂಡಿಸಿದ್ದ ಬಿಎಸ್‌ಎಫ್ ಯೋಧ ತೇಜ್ ಬಹದೂರ್ ಯಾದವ ಅವರ ಪತ್ನಿ ಶರ್ಮಿಳಾ ದೇವಿ ಅವರು ಬುಧವಾರ ದಿಲ್ಲಿ ಉಚ್ಚ ನ್ಯಾಯಾಲಯಕ್ಕೆ ತಿಳಿಸಿದರು.
ಯಾದವರನ್ನು ನಿಯೋಜಿಸಲಾಗಿರುವ ಸ್ಥಳದಲ್ಲಿ ಅವರನ್ನು ಭೇಟಿಯಾಗಲು ಮತ್ತು ಎರಡು ದಿನಗಳ ವಾಸ್ತವ್ಯಕ್ಕೆ ಅವರ ಪತ್ನಿಗೆ ಅವಕಾಶ ಕಲ್ಪಿಸುವಂತೆ ನ್ಯಾಯಮೂರ್ತಿಗಳಾದ ಜಿ.ಎಸ್.ಸಿಸ್ತಾನಿ ಮತ್ತು ವಿನೋದ ಗೋಯೆಲ್ ಅವರ ಪೀಠವು ಸರಕಾರಕ್ಕೆ ನಿರ್ದೇಶ ನೀಡಿತ್ತು.
ತನ್ನ ವಕೀಲರ ಮೂಲಕ ತನ್ನ ಪತಿಯ ಯೋಗಕ್ಷೇಮದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಶರ್ಮಿಳಾ, ಅವರನ್ನು ಪತ್ತೆ ಹಚ್ಚುವಂತೆ ಕೋರಿ ತಾನು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ಬಗ್ಗೆ ಇನ್ನು ಒತ್ತಾಯಿಸುವುದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಯಾದವ ಬಳಿ ಹೊಸ ಮೊಬೈಲ್ ಫೋನ್ ಇದೆ ಮತ್ತು ಅವರು ತನ್ನ ಕುಟುಂಬ ಸದಸ್ಯರೊಂದಿಗೆ ಮಾತನಾಡಲು ಯಾವುದೇ ನಿರ್ಬಂಧಗಳಿಲ್ಲ ಎಂದು ಕೇಂದ್ರ ಮತ್ತು ಬಿಎಸ್‌ಎಫ್ ಪರ ಹಾಜರಾಗಿದ್ದ ನ್ಯಾಯವಾದಿ ಗೌರಂಗ ಕಾಂತ್ ತಿಳಿಸಿದರು.
ಯಾವುದೇ ಸಂದರ್ಭದಲ್ಲಿಯೂ ಯಾದವರನ್ನು ಅಕ್ರಮ ಬಂಧನದಲ್ಲಿರಿಸಿರಲಿಲ್ಲ, ಅವರನ್ನು ಜಮ್ಮುವಿನ ಸಾಂಬಾ ಜಿಲ್ಲೆಯ ಕಾಲಿಬರಿಯ 88ನೇ ಬಟಾಲಿಯನ್‌ನ ಕೇಂದ್ರ ಕಚೇರಿಗೆ ಸ್ಥಳಾಂತರಿಸಲಾಗಿತ್ತು ಎಂದೂ ಅವರು ನ್ಯಾಯಾಲಯದಲ್ಲಿ ಹೇಳಿದರು.