×
Ad

ಕಳವು ಪ್ರಕರಣ: ಇಬ್ಬರು ಆರೋಪಿಗಳ ಬಂಧನ

Update: 2017-02-15 20:09 IST

ಮಂಗಳೂರು, ಫೆ.15: ನಗರದ ಬೊಕ್ಕಪಟ್ಣ ಬಳಿ ಶಂಕಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ಕಳವು ಪ್ರಕರಣದ ಇಬ್ಬರು ಆರೋಪಿಗಳನ್ನು ಬರ್ಕೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಉಳ್ಳಾಲ ಅನಿಲ್ ಕಾಂಪೌಂಡ್ ನಿವಾಸಿ ನಿಯಾಝ್ (26) ಮತ್ತು ತೊಕ್ಕೊಟ್ಟು ಸೇವಂತಿಗುಡ್ಡೆಯ ಶಮೀರ್ (36) ಬಂಧಿತ ಆರೋಪಿಗಳು. ಇವರಿಂದ ತಲಾ 12 ಗ್ರಾಂ ತೂಕದ 2 ಕರಿಮಣಿ ಸರ, 1 ಬೈಕ್, 4 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದರ ವೌಲ್ಯ 1,11,000 ರೂ. ಎಂದು ಅಂದಾಜಿಸಲಾಗಿದೆ.

  ಸರಗಳ್ಳತನ ಮತ್ತು ಕಳ್ಳತನ ಪ್ರಕರಣದ ವಿಶೇಷ ಕರ್ತವ್ಯದಲ್ಲಿ ನೇಮಕಗೊಂಡ ಬರ್ಕೆ ಅಪರಾಧ ವಿಭಾಗದ ಎಸ್ಸೈ ನರೇಂದ್ರ ಮತ್ತು ರೈಲ್ವೆ ರಕ್ಷಣಾ ದಳದ ಎಸ್ಸೈ ಭರತ್‌ರಾಜ್ ಮತ್ತು ಸಿಬ್ಬಂದಿ ವರ್ಗವು ಬುಧವಾರ ಪೂ.11:30ಕ್ಕೆ ಬೊಕ್ಕಪಟ್ಣ ಚರ್ಚ್ ಬಳಿ ಶಂಕಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ಇಬ್ಬರನ್ನು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆ ನಡೆಸಿದರು. ಆವಾಗ ಇಬ್ಬರ ಬಳಿಯೂ ಒಂದೊಂದು ಚಿನ್ನದ ಕರಿಮಣಿ ಸರ ಪತ್ತೆಯಾಯಿತು. ಅದರ ಬಗ್ಗೆ ಮತ್ತಷ್ಟು ವಿಚಾರಣೆಗೊಳಪಡಿಸಿದಾಗ ವರ್ಷದ ಹಿಂದೆ ಬೈಕ್‌ನಲ್ಲಿ ತೆರಳುವಾಗ ಗಾಂಧಿನಗರ ಕ್ರಾಸ್ ರಸ್ತೆಯಲ್ಲಿ ಒಂಟಿ ಮಹಿಳೆಯ ಚಿನ್ನದ ಕರಿಮಣಿ ಮತ್ತು ರೈಲ್ವೆ ಸ್ಟೇಶನ್‌ನಲ್ಲಿ ಚಲಿಸುವ ರೈಲಿನಿಂದ ಮಹಿಳೆಯ ಕರಿಮಣಿ ಕಸಿದು ಪರಾರಿಯಾಗಿರುವುದಾಗಿ ಮಾಹಿತಿ ನೀಡಿದರು.

ಆರೋಪಿಗಳಿಂದ 24 ಗ್ರಾಂ ತೂಕದ ಕರಿಮಣಿ ಸರ ಮತ್ತು ಕೃತ್ಯಕ್ಕೆ ಬಳಸಿದ ಬೈಕ್ ಹಾಗೂ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಎಸ್ಸೈ ಪ್ರಕಾಶ್ ಕೆ., ಸಿಬ್ಬಂದಿಗಳಾದ ಗಣೇಶ್, ರಾಜೇಶ್ ಅತ್ತಾವರ, ಕಿಶೋರ್ ಕೋಟ್ಯಾನ್, ಜಯರಾಮ್, ಸುನೀಲ್ ಕುಮಾರ್,ದೇವರಾಜನ್, ಕಿಶೋರ್ ಪೂಜಾರಿ, ನಾಗರಾಜ, ಮಹೇಶ್ ಪಾಟೀಲ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News