×
Ad

ಕೇಂದ್ರದ ಕಾಶ್ಮೀರ ನೀತಿ ಸಂಪೂರ್ಣ ವಿಫಲ:ಯೆಚೂರಿ

Update: 2017-02-15 20:16 IST

ಹೊಸದಿಲ್ಲಿ,ಫೆ.15: ಕಾಶ್ಮೀರದಲ್ಲಿ ಕಳೆದ ಮೂರು ದಿನಗಳಲ್ಲಿ ಯೋಧರ ಹತ್ಯೆಗಳ ಬಗ್ಗೆ ಕೇಂದ್ರದ ವೌನವನ್ನು ಬುಧವಾರ ಪ್ರಶ್ನಿಸಿರುವ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ಅವರು, ಇದು ಕಾಶ್ಮೀರದಲ್ಲಿ ಕೇಂದ್ರದ ನೀತಿಯ ಸಂಪೂರ್ಣ ವೈಫಲ್ಯವನ್ನು ಮತ್ತೊಮ್ಮೆ ದೃಢಪಡಿಸಿದೆ. ಯೋಧರ ಸಾವುಗಳ ಬಗ್ಗೆ ಈ ಸರಕಾರದ ವೌನ ಮತ್ತು ಅರ್ಥಪೂರ್ಣ ರಾಜಕೀಯ ಕ್ರಮದ ಕೊರತೆ ಆಘಾತಕಾರಿಯಾಗಿದೆ ಎಂದು ಹೇಳಿದ್ದಾರೆ.

ಸಶಸ್ತ್ರ ಪಡೆಗಳ ಕುರಿತು ಆಡಳಿತ ಬಿಜೆಪಿಯ ‘ಬಾಯಿಮಾತಿನ ’ ಸೇವೆ ಕೇವಲ ಚುನಾವಣಾ ಭಾಷಣಗಳಿಗೆ ಮಾತ್ರ ಮೀಸಲಾಗಿದೆಯೇ ಎಂದು ಅವರು ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಸೇನೆಯು ನಡೆಸಿದ್ದ ಸರ್ಜಿಕಲ್ ದಾಳಿಯನ್ನು ಅದು ತನ್ನ ಚುನಾವಣಾ ಪ್ರಚಾರದಲ್ಲಿ ಪ್ರಶಂಸಿಸಿದ್ದನ್ನು ಪ್ರಸ್ತಾಪಿಸಿ ಫೇಸ್‌ಬುಕ್ ಪೋಸ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

ಸೇನಾ ಸಿಬ್ಬಂದಿಗಳ ಸಾವುಗಳಿಗೆ ಸಂತಾಪಗಳನ್ನು ವ್ಯಕ್ತಪಡಿಸಿದ ಅವರು, ಸಶಸ್ತ್ರ ಪಡೆಗಳ ತ್ಯಾಗ-ಬಲಿದಾನಗಳತ್ತ ತನ್ನ ಜಡತೆಯಿಂದ ಸರಕಾರವು ಎಚ್ಚೆತ್ತುಕೊಳ್ಳಲು ಇನ್ನೆಷ್ಟು ಯೋಧರು ಹುತಾತ್ಮರಾಗಬೇಕು ಎಂದೂ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News