×
Ad

ಫೆ. 16ರ ‘ಚಲೋ ತುಮಕೂರು’ಗೆ 200 ಕಾರ್ಯಕರ್ತರು

Update: 2017-02-15 20:29 IST

ಮಂಗಳೂರು, ಫೆ.15: ತುಮಕೂರು ಗುಬ್ಬಿಯಲ್ಲಿ ನಡೆದ ದಲಿತ ಯುವಕ ಅಭಿಷೇಕ್‌ನ ಹಲ್ಲೆ ಪ್ರಕರಣವನ್ನು ಖಂಡಿಸಿ ಫೆ. 16ರಂದು ‘ಚಲೋ ತುಮಕೂರು-ಮಾನವತಾ ಸಮಾವೇಶ’ ನಡೆಯಲಿದ್ದು, ಇದರಲ್ಲಿ ದ.ಕ.ಜಿಲ್ಲೆಯಿಂದ 200 ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ದಲಿತ-ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ರಘುವೀರ್ ಸೂಟರ್‌ಪೇಟೆ ತಿಳಿಸಿದರು.


ನಗರದ ಬಲ್ಮಠ ಆರ್ಯ ಸಮಾಜದಲ್ಲಿ ಬುಧವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸವರ್ಣೀಯ ಹುಡುಗಿಯೊಂದಿಗೆ ಅಭಿಷೇಕ್ ಮಾತನಾಡಿದ ಎಂಬ ಕಾರಣಕ್ಕೆ ಆತನನ್ನು ಬೆತ್ತಲೆಗೊಳಿಸಿ, ಕೊರಳಿಗೆ ಚಪ್ಪಲಿ ಹಾರ ಹಾಕಿ ಅವಮಾನವೀಯವಾಗಿ ಹಲ್ಲೆ ನಡೆಸಲಾಗಿದೆ. ಇಂತಹ ಪ್ರಕರಣಗಳು ಪದೇ ಪದೇ ಸಂಭವಿಸುತ್ತಿರುವುದು ಖಂಡನೀಯ ಎಂದರು.

ಪ್ರಕರಣವನ್ನು ದಿಕ್ಕು ತಪ್ಪಿಸುವ ನಿಟ್ಟಿನಲ್ಲಿ ಅಭಿಷೇಕ್ ಮೇಲೆ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆದರೆ ಇದನ್ನು ನಿಯಂತ್ರಿಸಬೇಕಾದ ವ್ಯವಸ್ಥೆ ಮಾತ್ರ ಮೂಕವಾಗಿದೆ. ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಎಂಬುದು ಮರೀಚಿಕೆಯಾಗಿದೆ. ಹೀಗಾಗಿ ಇಂತಹ ಘಟನೆಗಳು ಮರುಕಳಿಸಬಾರದು ಹಾಗೂ ಸಂವಿಧಾನದ ತತ್ವಗಳಾದ ಸಹೋದರತೆ, ಸಹಬಾಳ್ವೆ ನೆಲೆಗೊಳ್ಳಲಿ ಎಂಬ ಆಶಯದೊಂದಿಗೆ ‘ಚಲೋ ತುಮಕೂರು’ ನಡೆಯಲಿದೆ. ಸಮಾವೇಶದಲ್ಲಿ 10 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಬೆಳಗ್ಗೆ 10ಕ್ಕೆ ತುಮಕೂರಿನ ಭೀಮಸಂದ್ರದಿಂದ ಸ್ವಾಭಿಮಾನಿ ಸಂಕಲ್ಪ ನಡಿಗೆ ಚಾಲನೆಗೊಂಡು ಟೌನ್‌ಹಾಲ್ ಲ್ರೈಬ್ರೆರಿ ಆವರಣದಲ್ಲಿ ಸಮಾವೇಶಗೊಳ್ಳಲಿದೆ ಎಂದು ರಘುವೀರ್ ಸೂಟರ್‌ಪೇಟೆ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ದಲಿತ ಸಂಘಟನೆಯ ಪ್ರಮುಖರಾದ ನಿರ್ಮಲ್‌ಕುಮಾರ್, ರಮೇಶ್ ಕೋಟ್ಯಾನ್, ಅಶೋಕ್ ಕೊಂಚಾಡಿ, ದೀಪಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News