×
Ad

ಕಾಪು ಪುರಸಭೆ: ತೆರಿಗೆ ಸಂಗ್ರಹದಲ್ಲಿ ಹೆಚ್ಚಳ

Update: 2017-02-15 20:49 IST

ಪಡುಬಿದ್ರಿ,ಫೆ.15: ಕಾಪು ಪುರಸಭೆಯಾದ ಮೇಲೆ ತೆರಿಗೆ ಸಂಗ್ರಹದಲ್ಲಿಯೂ ಹೆಚ್ಚಳವಾಗಿದ್ದು, ಈವರೆಗೆ ರು. 2 ಕೋಟಿ ತೆರಿಗೆ ಸಂಗ್ರಹವಾಗಿದೆ ಎಂದು ಶಾಸಕ ವಿನಯಕುಮಾರ್ ಸೊರಕೆ ಹೇಳಿದರು.

ಪುರಸಭಾ ಕಟ್ಟಡದಲ್ಲಿ ಕಾರ್ಯಚರಿಸುವ ಕಾಪು ನಗರ ಯೋಜನಾ ಪ್ರಾಧಿಕಾರದ ಕಚೇರಿಯನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಹೊಸದಾಗಿ ರಚನೆಗೊಂಡ ಪುರಸಭೆಗಳಲ್ಲಿ ಕಾಪು ಪುರಸಭೆ ಪ್ರಥಮ ಸ್ಥಾನದಲ್ಲಿದೆ. ಜನರಿಗೆ ನೀಡಿದ ಆಶ್ವಾಸನೆಗೆ ಅನುಗುಣವಾಗಿ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.

ನಗರೋತ್ಥಾನದಲ್ಲಿ ರು. 10 ಕೋಟಿ ಅನುದಾನ ಬರಲಿದ್ದು, ಸಮಗ್ರ ಕಾಪು ಅಭಿವೃಧ್ಧಿಗೆ ಯೋಜನೆ ರೂಪಿಸಲಾಗುವುದು. ನಗರ ಯೋಜನಾ ಪ್ರಾಧಿಕಾರ ರಚನೆ ಮೂಲಕ ಯೋಜನಾಬದ್ಧ ಕಾರ್ಯಗಳನ್ನು ಮಾಡಲಾಗುವುದು. ವಸತಿಗಾಗಿ ಬೇಡಿಕೆ ಹೆಚ್ಚಾಗಿದ್ದು, ಸರಿಯಾದ ಸರಕಾರಿ ಜಾಗಗಳನ್ನು ಗುರುತಿಸಿ, ಗೃಹಮಂಡಳಿ ಮೂಲಕ ವಸತಿ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು. ಈಗಾಗಲೇ ವಾಜಪೇಯಿ ವಸತಿ ಯೋಜನೆಯಡಿ 119 ಜನರಿಗೆ ಮನೆ ಮಂಜೂರಾತಿಯಾಗಿದೆ ಎಂದು ತಿಳಿಸಿದರು.

ಕಾಪು ನಗರ ಯೋಜನಾ ಪ್ರಾಧಿಕಾರದಿಂದ ಕೋಟೆ ಮಟ್ಟು ಗ್ರಾಮದ ಪಳ್ಳಿಗುಡ್ಡೆ ಕ್ರೀಡಾಂಗಣವನ್ನು ಅಭಿವೃದ್ಧಿ ಪಡಿಸಲಾಗುವುದು. ಕೆರೆ, ಉದ್ಯಾನವನ, ಕ್ರೀಡಾಂಗಣ ಹಾಗೂ ರುಧ್ರಭೂಮಿ ನಿಮಾಣಕ್ಕೆ ಪ್ರಾಧಿಕಾರದ ಮೂಲಕ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಪ್ರಾಧಿಕಾರದ ಅಧ್ಯಕ್ಷ ದಿವಾಕರ ಶೆಟ್ಟಿ ಕಾಪು ಹೇಳಿದರು.

 ಪ್ರಾಧಿಕಾರಕ್ಕೆ ರೂ. 3 ಕೋಟಿ ಅನುದಾನ ಬರಲಿದ್ದು, ಸಮಗ್ರ ಯೋಜನೆ ತಯಾರಿಸಿ ಹಂತ ಹಂತವಾಗಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಕೈಗಾರಿಕಾ ಪ್ರದೇಶ ನಿರ್ಮಾಣಕ್ಕೆ ಯೋಜನೆ ಸಿದ್ದಪಡಿಸಲಾಗುವುದು. ಪುರಸಭಾ ವ್ಯಾಪ್ತಿ ಹಾಗೂ ಕೋಟೆ-ಮಟ್ಟು, ಪಾಂಗಾಳ, ಮಜೂರು ಹಾಗೂ ಉಚ್ಚಿಲ ಗ್ರಾಮಗಳು ಯೋಜನಾ ಪ್ರಾಧಿಕಾರದ ವ್ಯಾಪ್ತಿಗೆ ಬರಲಿವೆ. ಅಧ್ಯಕ್ಷ ಅವಧಿಯ ಮೂರು ವರ್ಷಗಳಲ್ಲಿ ಯೋಜನಾ ಬದ್ಧವಾಗಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವುದಾಗಿ ಅವರು ಭರವಸೆ ನೀಡಿದರು.

ಪುರಸಭೆ ಅಧ್ಯಕ್ಷೆ ಸೌಮ್ಯಾ, ಉಪಾಧ್ಯಕ್ಷ ಕೆ.ಎಚ್. ಉಸ್ಮಾನ್, ಸ್ಥಾಯೀ ಸಮಿತಿ ಅಧ್ಯಕ್ಷ ಹಮೀದ್ ಮೂಳೂರು, ವಿರೋಧ ಪಕ್ಷದ ನಾಯಕ ಅರುಣ್ ಶೆಟ್ಟಿ, ಮುಖ್ಯಾಧಿಕಾರಿ ರಾಯಪ್ಪ, ಪ್ರಾಧಿಕಾರದ ಕಾರ್ಯದರ್ಶಿ ಪರಶಿವ ಮೂರ್ತಿ, ಕಾಪು ಅಭಿವೃದ್ಧಿ ಸಮಿತಿ ಅಧ್ಯಕ್ಷ ವಾಸುದೇವ ಶೆಟ್ಟಿ, ಸಾಯಿ ರಾಧಾ ಹೆರಿಟೇಜ್‌ನ ಮನೋಹರ ಶೆಟ್ಟಿ, ಅಶೋಕ್‌ಕುಮಾರ್ ಕೊಡವೂರು, ದೇವಿಪ್ರಸಾದ್ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನಚಂದ್ರ ಶೆಟ್ಟಿ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News