ಸರಬ್‌ಜಿತ್ ಕೊಲೆ ಪ್ರಕರಣದ ತನಿಖೆಯಲ್ಲಿ ಅಲ್ಪ ಪ್ರಗತಿ : ಪಾಕ್ ನ್ಯಾಯಾಧೀಶರ ಆಸಮಾಧಾನ
ಲಾಹೋರ್,ಫೆ.15: ನಾಲ್ಕು ವರ್ಷಗಳ ಹಿಂದೆ ಪಾಕಿಸ್ತಾನದ ಜೈಲಿನಲ್ಲಿ ನಡೆದ ಭಾರತೀಯ ಪ್ರಜೆ ಸರಬ್‌ಜಿತ್‌ಸಿಂಗ್‌ನ ಕೊಲೆ ಪ್ರಕರಣದ ತನಿಖೆಯಲ್ಲಿ ಅಲ್ಪ ಮಟ್ಟದ ಪ್ರಗತಿಯಾಗಿರುವ ಬಗ್ಗೆ ಪಾಕ್ ನ್ಯಾಯಾಧೀಶರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಕರಣದ ತನಿಖೆಯಲ್ಲಿ ನ್ಯಾಯಾಲಯದ ಜೊತೆ ಸರಿಯಾಗಿ ಸಹಕರಿಸದಿರುವುದಕ್ಕಾಗಿ ಪೊಲೀಸರಿಗೆ ಎಚ್ಚರಿಕೆಯನ್ನು ನೀಡಿರುವ ಅವರು, ಜೈಲು ಅಧಿಕಾರಿಯ ಬಂಧನಕ್ಕೆ ಆದೇಶಿಸಿದ್ದಾರೆ.
ಸರಬ್‌ಜಿತ್‌ಸಿಂಗ್ ಹತ್ಯೆಯಾದ ಲಾಹೋರ್‌ನ ಕೋಟ್‌ಲಾಖ್‌ಪತ್ ಜೈಲಿನ ಉಪಅಧೀಕ್ಷಕರನ್ನು ಫೆಬ್ರವರಿ 17ರಂದು ತನ್ನ ಮುಂದೆ ಹಾಜರುಪಡಿಸುವಂತೆ ಲಾಹೋರ್‌ನ ಹೆಚ್ಚುವರಿ ಜಿಲ್ಲಾ ಹಾಗೂ ಸೆಶನ್ಸ್ ನ್ಯಾಯಾಧೀಶರು ಬುಧವಾರ ಆದೇಶ ನೀಡಿದ್ದಾರೆ.
ನಾಲ್ಕೂವರೆ ವರ್ಷಗಳ ಹಿಂದೆ ನಡೆದ ಸರಬ್‌ಜಿತ್ ಹತ್ಯೆ ಪ್ರಕರಣದಲ್ಲಿ ತೀರಾ ಕಡಿಮೆ ಪ್ರಗತಿಯಾಗಿರುವ ಬಗ್ಗೆ ನ್ಯಾಯಾಧೀಶರು ಅತೃಪ್ತಿ ವ್ಯಕ್ತಪಡಿಸಿದರು. ಹಲವು ಸಲ ಸಮನ್ಸ್ ಜಾರಿಗೊಳಿಸಿದರೂ, ನ್ಯಾಯಾಲಯದ ಮುಂದೆ ವಿಚಾರಣೆಗೆ ಹಾಜರಾಗದ ಕೋಟ್‌ಲಾಖ್‌ಪಟ್ ಜೈಲಿನ ಉಪಅಧೀಕ್ಷಕರಿಗೆ ಜಾಮೀನುಯೋಗ್ಯ ಬಂಧನ ವಾರಂಟ್ ಕೂಡಾ ಅವರು ಜಾರಿಗೊಳಿಸಿದರು.
2013ರ ಮೇ ತಿಂಗಳಲ್ಲಿ ಮರಣದಂಡನೆ ಎದುರಿಸುತ್ತಿರುವ ಪಾಕ್ ಕೈದಿಗಳಾದ ಆಮೀರ್‌ತಾಂಬಾ ಹಾಗೂ ಮದಸ್ಸರ್ ಎಂಬವರು ಜೈಲಿನಲ್ಲಿ ಸರಬ್‌ಜಿತ್ ಮೇಲೆ ದಾಳಿ ನಡೆಸಿ, ಆತನನ್ನು ಹತ್ಯೆಗೈದಿದ್ದಾರೆಂದು ಆರೋಪಿಸಲಾಗಿತ್ತು. ಸರಬ್‌ಜಿತ್ ಪ್ರಕರಣದ ವಿಚಾರಣೆಯನ್ನು ಮೊದಲು ಲಾಹೋರ್ ಹೈಕೋರ್ಟ್‌ನ ನ್ಯಾಯಮೂರ್ತಿ ಮಝರ್ ಅಲಿ ನಖ್ವಿ ನಡೆಸಿದ್ದರೂ, ಆನಂತರ ಅದನ್ನು ಸೆಶನ್ಸ್ ಕೋರ್ಟ್‌ಗೆ ಹಸ್ತಾಂತರಿಸಲಾಗಿತ್ತು.
ಏಕಸದಸ್ಯ ಆಯೋಗವು ವಿದೇಶಾಂಗ ಸಚಿವಾಲಯದ ಮೂಲಕ ಸರಬ್‌ಜಿತ್‌ನ ಬಂಧುಗಳಿಗೂ ನೋಟಿಸ್ ಜಾರಿಗೊಳಿಸಿ, ಆತನ ಸಾವಿನ ಬಗ್ಗೆ ತಮ್ಮ ಬಳಿ ಯಾವುದಾದರೂ ಪುರಾವೆಗಳಿದ್ದಲ್ಲಿ ಅದನ್ನು ಹಾಜರುಪಡಿಸುವಂತೆಯೂ ಸೂಚಿಸಿತ್ತು.