×
Ad

ಟೋಲ್ ಶುಲ್ಕ ಪ್ರಭಾವ: ಫೆ.17ರಿಂದ ಬಸ್‌ದರದಲ್ಲಿ ಏರಿಕೆ

Update: 2017-02-15 21:40 IST

ಉಡುಪಿ, ಫೆ.15: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸಾಸ್ತಾನ ಹಾಗೂ ಹೆಜಮಾಡಿ ಟೋಲ್‌ಗೇಟ್‌ಗಳಲ್ಲಿ ಟೋಲ್ ಸಂಗ್ರಹಣೆಯನ್ನು ಫೆ.9ರಿಂದ ಪ್ರಾರಂಭಿಸಿರುವುದರಿಂದ ಟೋಲ್ ಸಂಗ್ರಹಣೆಯ ಅಧಿಕ ವೆಚ್ಚವನ್ನು ಭರಿಸಲು ಟೋಲ್ ಮೂಲಕ ಸಾಗುವ ಪ್ರತಿ ಪ್ರಯಾಣಿಕರ ಪ್ರಯಾಣ ದರದಲ್ಲಿ 3 ರೂ. ಟೋಲ್‌ಸೆಸ್‌ನ್ನು ಫೆ.17 ಶುಕ್ರವಾರದಿಂದ ಹೆಚ್ಚುವರಿಯಾಗಿ ವಸೂಲು ಮಾಡಲು ನಿರ್ಧರಿಸಲಾಗಿದೆ ಎಂದು ಕೆನರಾ ಬಸ್ ಮಾಲಕರ ಸಂಘದ ಉಪಾಧ್ಯಕ್ಷ ಸದಾನಂದ ಛಾತ್ರ ತಿಳಿಸಿದ್ದಾರೆ.

ಬುಧವಾರ ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಟೋಲ್ ದರದಂತೆ ನಮಗೆ 5 ರೂ. ಹೆಚ್ಚಿಸುವ ಅನಿವಾರ್ಯತೆ ಇದ್ದರೂ, ಪ್ರಸ್ತುತ ಟೋಲ್ ಮೂಲಕ ಸಾಗುವ ಪ್ರಯಾಣಿಕರಿಗೆ ಮಾತ್ರ ಶುಕ್ರವಾರದಿಂದ ಮೂರು ರೂ. ಹೆಚ್ಚುವರಿ ದರ ವಿಧಿಸಲಾಗುವುದು ಎಂದವರು ನುಡಿದರು.

ಉಡುಪಿ ಮತ್ತು ಮಂಗಳೂರು ನಡುವೆ ಸಂಚರಿಸುವ ಖಾಸಗಿ ಬಸ್‌ಗಳು ಜ.25ರಿಂದ ಕನಿಷ್ಠ 1ರೂ.ನಿಂದ ಗರಿಷ್ಠ 5ರೂ. ದರ ಏರಿಕೆ ಮಾಡಿರುವ ಬಗ್ಗೆ ಅವರನ್ನು ಪ್ರಶ್ನಿಸಿದಾಗ, ಅದಕ್ಕೂ ಟೋಲ್‌ಗೂ ಯಾವುದೇ ಸಂಬಂಧವಿಲ್ಲ. ಅದು ಡಿಸೇಲ್ ದರದಲ್ಲಾದ ಹೆಚ್ಚಳ (ಲೀ.ಗೆ 45ರೂ.ನಿಂದ ಗರಿಷ್ಠ 63ರೂ.ಗೆ), ಬಿಡಿ ಭಾಗಗಳ ಬೆಲೆಯಲ್ಲಾದ ಹೆಚ್ಚಳ ಹಾಗೂ ಸರಕಾರಕ್ಕೆ ನೀಡಬೇಕಾದ ತೆರಿಗೆಯಲ್ಲಾದ ಹೆಚ್ಚಳದ ಹಿನ್ನೆಲೆಯಲ್ಲಿ ಈ ಏರಿಕೆ ಮಾಡಲಾಗಿದೆ. ಅದು ಸರಕಾರ ನಿಗದಿಪಡಿಸಿದ ದರದೊಳಗೆ ನಾವು ನಿಗದಿ ಪಡಿಸಿದ್ದೇವೆ ಎಂದರು.

ಖಾಸಗಿ ಬಸ್‌ಗಳು ಫೆ.9ರಿಂದಲೇ ಟೋಲ್ ಶುಲ್ಕವನ್ನು ಪಾವತಿಸುತ್ತಿವೆ. ಪ್ರತಿ ಟ್ರಿಪ್‌ವೇಳೆ ಸಾಸ್ತಾನದಲ್ಲಿ 195ರೂ. ಹಾಗೂ ಹೆಜಮಾಡಿಯಲ್ಲಿ 160ರೂ. ಟೋಲ್‌ನ್ನು ನಾವೀಗ ಪಾವತಿಸುತ್ತಿದ್ದೇವೆ ಎಂದು ಸದಾನಂದ ಛಾತ್ರ ನುಡಿದರು. ಬಹುಕಾಲದಿಂದ ಸುರತ್ಕಲ್‌ನಲ್ಲಿ ಟೋಲ್ ನೀಡುತಿದ್ದರೂ ಅದನ್ನು ನಾವೇ ಭರಿಸುತಿದ್ದು, ಅದನ್ನು ಪ್ರಯಾಣಿಕರ ಮೇಲೆ ಹೇರಿಲ್ಲ ಎಂದರು.

ಸದ್ಯಕ್ಕೆ ಟೋಲ್‌ನ್ನು ಹಾದುಹೋಗುವ ಪ್ರಯಾಣಿಕರಿಂದ ಮಾತ್ರ ಮೂರು ರೂ.ಹೆಚ್ಚುವರಿ ದರವನ್ನು ಪಡೆಯುತ್ತೇವೆ. ಟೋಲ್ ಇಲ್ಲದ ಜನರಿಗೆ ಹಿಂದಿನಂತೆ ಟಿಕೇಟ್ ದರವಿರುತ್ತದೆ. ಇದರಂತೆ ಕುಂದಾಪುರದಿಂದ ಉಡುಪಿಗೆ ಬರಲು ಶುಕ್ರವಾರದಿಂದ 43ರೂ. ನೀಡಬೇಕಾಗುತ್ತದೆ. ಅದೇ ರೀತಿ ಉಡುಪಿಯಿಂದ ಮಂಗಳೂರಿಗೆ ಹೋಗಲು 63 ರೂ. ಟಿಕೇಟ್ ಚಾರ್ಜ್ ನೀಡಬೇಕಾಗುತ್ತದೆ.

ಆದರೆ ಬ್ರಹ್ಮಾವರದಿಂದ ಉಡುಪಿಗೆ ಪ್ರಯಾಣಿಸುವ ಪ್ರಯಾಣ ದರದಲ್ಲಿ ಹೆಚ್ಚಳವಾಗದು. ಅದೇ ರೀತಿ ಉಡುಪಿಯಿಂದ ಪಡುಬಿದ್ರಿ ಪ್ರಯಾಣ ದರ ಇಂದಿನಷ್ಟೇ ಇರುತ್ತದೆ. ಆದರೆ ಪಡುಬಿದ್ರಿಯಿಂದ ಮೂಲ್ಕಿಗೆ ತೆರಳುವವರು ಮೂರು ರೂ.ಹೆಚ್ಚುವರಿ ನೀಡಬೇಕಾಗುತ್ತದೆ. ಸಾಸ್ತಾನದಿಂದ ಸಾಲಿಗ್ರಾಮಕ್ಕೆ ಹೋಗಲೂ ಮೂರು ರೂ.ಹೆಚ್ಚು ನೀಡಬೇಕು.

ಜ.25ಕ್ಕೆ ಮೊದಲು ಕುಂದಾಪುರ-ಉಡುಪಿ ನಡುವೆ 38ರೂ. ಟಿಕೇಟ್ ದರವಾಗಿದ್ದರೆ, ಅಂದು ಎರಡು ರೂ.ಹೆಚ್ಚಳವಾಗಿದೆ. ಈಗ ಮತ್ತೆ ಮೂರು ರೂ. ಸೇರಿ ಪ್ರಯಾಣಿಕನೊಬ್ಬ ಈಗ ಒಟ್ಟು ಐದು ರೂ.ಹೆಚ್ಚು ನೀಡಬೇಕು. ಅದೇ ರೀತಿ ಉಡುಪಿ-ಮಂಗಳೂರು ಬಸ್‌ದರ 55ರೂ. ಇದ್ದಿದ್ದು, 60ಕ್ಕೆ ಈಗ 63ರೂ.ಗೆ ಏರಲಿದೆ. 15 ದಿನಗಳ ಅಂತರದಲ್ಲಿ ಉಡುಪಿ- ಮಂಗಳೂರು ಪ್ರಯಾಣಕ್ಕೆ ಒಟ್ಟು 8 ರೂ.ಹೆಚ್ಚಳವಾದಂತಾಗುತ್ತದೆ.

ಸರಕಾರಿ ಬಸ್‌ಗಳಿಗೂ ಇದೇ ಪ್ರಮಾಣದಲ್ಲಿ ಟಿಕೇಟ್ ದರದಲ್ಲಿ ಹೆಚ್ಚಳವಾಗಿದೆ ಎಂದು ಸಮರ್ಥಿಸಿಕೊಂಡ ಛಾತ್ರಾ ಅವರು, ಡಿಸೇಲ್ ದರ ಈಗ ಹಿಂದೆಂದೂ ಇಲ್ಲದಷ್ಟು ಏರಿಕೆಯಾಗಿದೆ. ರಾಜ್ಯ ಸರಕಾರ ತೆರಿಗೆಯನ್ನು 32,000ರೂ.ನಿಂದ 49,300ರೂ.ಗೆ ಏರಿಸಿದ್ದು, ನಮ್ಮ ಯಾವುದೇ ಮನವಿಗೆ ಸ್ಪಂಧಿಸಿಲ್ಲ ಎಂದರು. ಸರಕಾರಿ ಬಸ್‌ಗಳು ಟಿಕೇಟ್‌ನಲ್ಲಿ ಐು ರೂ. ಹೆಚ್ಚಳ ಮಾಡಿವೆ ಎಂದರು.

ನಮ್ಮ ಸಂಘ ಅನುಷ್ಠಾನಕ್ಕೆ ತಂದ ಶೇ.35ರಷ್ಟು ರಿಯಾಯಿತಿಯ ಆರ್‌ಎಫ್‌ಐ ಕಾರ್ಡ್‌ನ್ನು ಎರಡೂ ಜಿಲ್ಲೆಗಳ ಒಟ್ಟು 25,000 ಮಂದಿ ನಿತ್ಯಪ್ರಯಾಣಿಕರು ಬಳಸುತಿದ್ದಾರೆ. ಅವರಿಗೆ ಪ್ರಯಾಣ ದರದಲ್ಲಿ ರಿಯಾಯಿತಿ ದೊರೆಯುತ್ತದೆ. ವಿದ್ಯಾರ್ಥಿಗಳಿಗೂ ಶೇ.50ರ್ಟು ರಿಯಾಯಿತಿ ನೀಡುತಿದ್ದೇವೆ ಎಂದರು.

ಚಿಲ್ಲರೆ ಸಮಸ್ಯೆಗೆ ಕ್ಯಾಶ್ ಕಾರ್ಡ್:ಪ್ರಯಾಣದ ವೇಳೆ ಚಿಲ್ಲರೆ ಸಮಸ್ಯೆ ನಿವಾರಿಸಲು ಪ್ರೀಪೆಯ್ಟೆ ‘ಕ್ಯಾಶ್ ಕಾರ್ಡ್’ ಸೌಲಭ್ಯವನ್ನು ಇನ್ನೊಂದು ತಿಂಗಳೊಳಗೆ ಜಾರಿಗೊಳಿಸುತ್ತೇವೆ. ಇದರಿಂದ ಮೊದಲೇ ನಗದು ನೀಡಿ ಆ ಮೊತ್ತಕ್ಕೆ ಕಾರ್ಡ್ ಪಡೆದು ಅದನ್ನು ಬಳಿಸಿ ಅದು ಖರ್ಚಾಗುವವರೆಗೆ ಹಣ ನೀಡದೇ ಪ್ರಯಾಣಿಸುವ ಸೌಲಭ್ಯವಿರುತ್ತದೆ ಎಂದು ಛಾತ್ರ ನುಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸುರೇಶ್ ನಾಯಕ್, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಗಣನಾಥ ಹೆಗ್ಡೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News