×
Ad

ನಗರಸಭೆ ತೆರವು ಕಾರ್ಯಾಚರಣೆ: 4 ತಳ್ಳುಗಾಡಿಗಳು ವಶಕ್ಕೆ

Update: 2017-02-15 21:42 IST

ಉಡುಪಿ, ಫೆ.15: ನಗರದ ಸಿಟಿಬಸ್ ನಿಲ್ದಾಣದ ಬಳಿ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ ನಾಲ್ಕು ತಳ್ಳುಗಾಡಿಗಳನ್ನು ಉಡುಪಿ ನಗರಸಭೆ ಅಧಿ ಕಾರಿಗಳು ಇಂದು ಸಂಜೆ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ.

ನಗರದ ಹಲವು ರಸ್ತೆಗಳನ್ನು ಬೀದಿ ವ್ಯಾಪಾರ ನಿಷೇಧಿತ ಪ್ರದೇಶ ಎಂಬು ದಾಗಿ ನಗರಸಭೆ ನಿರ್ಣಯಿಸಿ ಈಗಾಗಲೇ ಫಲಕಗಳನ್ನು ಹಾಕಿದ್ದು, ಅದರಲ್ಲಿ ಸಿಟಿ ಬಸ್ ನಿಲ್ದಾಣದ ಅಂಜುಮಾನ್ ಮಸೀದಿ ರಸ್ತೆ ಕೂಡ ಒಂದು. ಈ ರಸ್ತೆಯಲ್ಲಿ ಐದು ಮಂದಿ ಉತ್ತರ ಕರ್ನಾಟಕದ ವ್ಯಾಪಾರಸ್ಥರು ತಳ್ಳುಗಾಡಿ ಯಲ್ಲಿ ಹಣ್ಣುಹಂಪಲುಗಳನ್ನು ಮಾರಾಟ ಮಾಡುತ್ತಿದ್ದ ಕುರಿತು ಮಾಹಿತಿ ಪಡೆದುಕೊಂಡ ನಗರಸಭೆ ಕಂದಾಯ ಅಧಿಕಾರಿ ಚಂದ್ರ ಪೂಜಾರಿ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ.

ಉಡುಪಿ ನಗರ ಠಾಣೆಯ ಪೊಲೀಸರೊಂದಿಗೆ ಕಾರ್ಯಾಚರಣೆಗೆ ಇಳಿದ ತಂಡ ಐದರಲ್ಲಿ ನಾಲ್ಕು ತಳ್ಳುಗಾಡಿಗಳನ್ನು ವಶಕ್ಕೆ ತೆಗೆದು ಕೊಂಡಿದೆ. ಈ ಸಂದರ್ಭದಲ್ಲಿ ತಳ್ಳಾಟ ನಡೆದ ಪರಿಣಾಮ ತಳ್ಳುಗಾಡಿಗಳು ರಸ್ತೆಗೆ ಅಡ್ಡ ಬಿದ್ದು ಅದರಲ್ಲಿದ್ದ ಹಣ್ಣುಹಂಪಲುಗಳು ರಸ್ತೆಯಲ್ಲಿ ಚೆಲ್ಲಿದ್ದವು. ಇದರ ಮೇಲೆಯೇ ಬಸ್‌ಗಳು ಸಂಚರಿಸಿದ ಪರಿಣಾಮ ಹಣ್ಣುಗಳು ಅಪ್ಪಚ್ಚಿಯಾದವು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವ್ಯಾಪಾರಸ್ಥರು ಪೊಲೀಸರು ಹಾಗೂ ಅಧಿಕಾರಗಳೊಂದಿಗೆ ವಾಗ್ವಾದಕ್ಕೆ ಇಳಿದರು. ತಳ್ಳುಗಾಡಿಗಳನ್ನು ಬಿಟ್ಟುಕೊಡದೆ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಘಟನೆಯ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಜನಸ್ತೋಮವೇ ನೆರೆದಿತ್ತು. ಇದರ ಪರಿಣಾಮ ಇಡೀ ರಸ್ತೆಯಲ್ಲಿ ಸಂಚಾರ ವ್ಯತ್ಯಯ ಉಂಟಾ ಯಿತು. ರಸ್ತೆಯಲ್ಲಿ ಚೆಲ್ಲಿದ್ದ ಸೇಬು, ಕಿತ್ತಲೆ ಹಾಗೂ ದ್ರಾಕ್ಷಿ ಹಣ್ಣುಗಳನ್ನು ಸಾರ್ವಜನಿಕರು ಚೀಲಗಳಿಗೆ ತುಂಬಿಸಿ ಹೊತ್ತೊಯ್ದರು. ಸಾಕಷ್ಟು ಹಣ್ಣು ಹಂಪಲುಗಳು ಹಾಳಾಗಿ ರಸ್ತೆಯಲ್ಲೇ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News