ನಮ್ಮ ಸರಕಾರ ಬಂದರೆ ಉ.ಪ್ರ ಹಣ್ಣು ಹಂಪಲು ಸಂಸ್ಕರಣಿಯ ಕೇಂದ್ರವಾಗಲಿದೆ : ರಾಹುಲ್ ಗಾಂಧಿ
ಬಾರಬಂಕಿ,ಫೆ. 16: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರಮೋದಿ ನೀತಿಯನ್ನು ಟೀಕಿಸಿದ್ದು, ಕಾಂಗ್ರೆಸ್ ಮತ್ತು ಸಮಾಜವಾದಿ ಪಾರ್ಟಿ ಸರಕಾರ ಅಧಿಕಾರಕ್ಕೆ ಬಂದರೆ ಉತ್ತರಪ್ರದೇಶವನ್ನು ಜಗತ್ತಿನ ಫ್ರೂಟ್ ಫ್ಯಾಕ್ಟರಿ ಹಬ್ ಮಾಡಲಿದೆ ಎಂದು ಹೇಳಿದ್ದಾರೆ.
ಬಾಳೆಹಣ್ಣು,ಟೊಮೆಟೊ ಉತ್ಪಾದನೆಯಲ್ಲಿ ವಿಶೇಷ ಸ್ಥಾನವನ್ನು ಹೊಂದಿರುವ ಬಾರಬಂಕಿಯ ಜೈದ್‌ಪುರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಹಣ್ಣುಹಂಪಲುಗಳ ಸಂಸ್ಕರಣೆ ನಡೆಸಿ ರಫ್ತು ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಇದರಿಂದಾಗಿ ಇಲ್ಲಿನ ರೈತರಿಗೆ ಅವರ ಬೆಳೆಗಳಿಗೆ ಸೂಕ್ತ ಪೇಟೆಧಾರಣೆ ಸಿಗಲಿದೆ. ಎರಡೂವರೆವರ್ಷಗಳ ಹಿಂದೆ ಲೋಕಸಭಾ ಚುನಾವಣೆಯ ವೇಳೆ ನರೇಂದ್ರ ಮೋದಿ ದೇಶದ ಎರಡು ಕೋಟಿ ಯುವಕರಿಗೆ ಉದ್ಯೋಗ ನೀಡುತ್ತೇನೆ ಎಂದಿದ್ದರು ಆದರೆ ದೇಶಾದ್ಯಂತ ಕಳೆದ ಎರಡೂವರೆವರ್ಷಗಳಲ್ಲಿ ಒಂದು ಲಕ್ಷ ಯುವಕರಿಗೂ ಕೆಲಸ ಸಿಕ್ಕಿಲ್ಲ. ಬದಲಾಗಿ ಜನರನ್ನು ಬ್ಯಾಂಕ್‌ನ ಮುಂದೆ ಕ್ಯೂ ನಿಲ್ಲಿಸಿದರು ಎಂದು ಮೋದಿಯನ್ನು ರಾಹುಲ್ ಟೀಕಿಸಿದರು.
ಮೋದಿ ಎರಡೂವರೆವರ್ಷಗಳ ತನ್ನ ಪ್ರಧಾನಿಯ ಕಾಲಾವಧಿಯಲ್ಲಿ 50ಬೃಹತ್ ಶ್ರೀಮಂತರ 40ಸಾವಿರಕೋಟಿ ಸಾಲಮನ್ನಾ ಮಾಡಿದ್ದಾರೆ. ಕೇಂದ್ರ ಸರಕಾರದ ಮುಂದಿನ ಅವಧಿಯಲ್ಲಿ ಶ್ರೀಮಂತರ ಆರು ಲಕ್ಷ ಕೋಟಿ ರೂಪಾಯಿ ಸಾಲಮನ್ನಾ ಮಾಡುವ ಕುರಿತು ಚಿಂತನೆ ನಡೆಸುತ್ತಿದೆ. ಉದ್ಯಮಿಗಳ ಸಾಲ ಮನ್ನಾ ಮಾಡುಬಹುದಾದರೆ ರೈತರ ಸಾಲ ಮನ್ನಾ ಯಾಕೆ ಸಾಧ್ಯವಿಲ್ಲ ಎಂದು ರಾಹುಲ್ ಪ್ರಶ್ನಿಸಿದರು ಎಂದು ವರದಿಯಾಗಿದೆ.