×
Ad

ಕಲ್ಲಾಜೆ: ವಿದ್ಯುತ್ ಕಂಬ ಉರುಳಿಬಿದ್ದು ಬೈಕ್ ಸವಾರ ಮೃತ್ಯು

Update: 2017-02-16 13:54 IST

ಕಡಬ, ಫೆ.16: ವಿದ್ಯುತ್ ಕಂಬವೊಂದು ಮೈಮೇಲೆ ಬಿದ್ದ ಪರಿಣಾಮ ಬೈಕ್ ಸಹ ಸವಾರ ಯುವಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಲ್ಲಾಜೆ ಎಂಬಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ. ಘಟನೆಯಲ್ಲಿ ಬೈಕ್ ಚಲಾಯಿಸುತ್ತಿದ್ದ ವ್ಯಕ್ತಿಯೂ ಗಂಭೀರ ಗಾಯಗೊಂಡಿದ್ದಾರೆ.

ಕೊಂಬಾರು ಕಾಲನಿ ನಿವಾಸಿ ವಾಸುದೇವ ಎಂಬವರ ಪುತ್ರ ಮನೋಹರ್(19) ಮೃತಪಟ್ಟವರಾಗಿದ್ದಾರೆ. ಬೈಕ್ ಚಲಾಯಿಸುತ್ತಿದ್ದ ಇಲ್ಲಿನ ದಿಣ ಸೆಲ್ವರಾಜು ಎಂಬವರ ಪುತ್ರ ಪ್ರಭಾಕರ್ ಗಾಯಗೊಂಡವರಾಗಿದ್ದಾರೆ.

ಈ ದುರ್ಘಟನೆಗೆ ಹಾಲುಮಡ್ಡಿ(ದೂಫ) ಮರವೊಂದು ವಿದ್ಯುತ್ ತಂತಿಯ ಮೇಲೆ ಬಿದ್ದಿದ್ದೇ ಕಾರಣ ಎಂದು ಹೇಳಲಾಗಿದೆ. ಮರ ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಕಂಬ ಉರುಳಿಬಿದ್ದಿದೆ. ಈ ವೇಳೆ ಅದೇ ದಾರಿಯಾಗಿ ಸಂಚರಿಸುತ್ತಿದ್ದ ಮನೋಹರ್ ಹಾಗೂ ಪ್ರಭಾಕರ್ ಇದರಡಿಯಲ್ಲಿ ಸಿಲುಕಿದ್ದಾರೆ. ಘಟನೆಯಲ್ಲಿ ಪ್ರಭಾಕರ್ ಗಾಯಗಳೊಂದಿಗೆ ಪಾರಾಗಿದ್ದಾರೆ. ಆದರೆ ಮನೋಹರ್ ಕಂಬದ ಅಡಿಯಲ್ಲಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಕಾರಿಯಾಗುತ್ತಿರುವ ಹಾಲುಮಡ್ಡಿ ಸಂಗ್ರಹ
ಮರ್ಧಾಳದಿಂದ ಕೈಕಂಬವರೆಗೆ ಸುಬ್ರಹ್ಮಣ್ಯ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಇಕ್ಕೆಡೆಗಳಲ್ಲೂ ದೂಫದ ಮರಗಳ ಬುಡಗಳನ್ನು ಟೊಳ್ಳಾಗಿಸಿ ಎಣ್ಣೆ ತೆಗೆಯಲಾಗಿದೆ. ಇಂತಹ ಮರಗಳನ್ನು ಕಡಿಯದೆ ಹಾಗೇ ಬಿಟ್ಟ ಪರಿಣಾಮ ಗಾಳಿ ಬೀಸಿದಾಗ ಇವುಗಳು ರಸ್ತೆಗುರುಳುತ್ತಿರುವುದು ಸಾಮಾನ್ಯವಾಗಿದೆ. ಕಳೆದೆರಡು ವರ್ಷಗಳಿಂದ ಇಂತಹ ಅಪಾಯಕಾರಿ ಘಟನೆಗಳು ಪದೇ ಪದೇ ನಡೆಯುತ್ತಿದೆ.

ಅರಣ್ಯ ಇಲಾಖೆಯವರು ಕಾನೂನು ನೆಪವೊಡ್ಡಿ ಇಂತಹ ಮರಗಳನ್ನು ಕಡಿಯುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News