×
Ad

ಯಡಿಯೂರಪ್ಪ ವಿರುದ್ಧ ಆದಾಯ ತೆರಿಗೆ ಇಲಾಖೆ ಸ್ವಯಂಪ್ರೇರಿತ ಕೇಸು ದಾಖಲಿಸಲಿ

Update: 2017-02-16 15:54 IST

ಮಂಗಳೂರು, ಫೆ.16: ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಹೈಕಮಾಂಡ್‌ಗೆ 1 ಸಾವಿರ ಕೋ.ರೂ. ‘ಕಪ್ಪ’ ಸಲ್ಲಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಾಡಿರುವ ಆರೋಪ ಗಂಭೀರವಾದುದು. ಆದಾಯ ತೆರಿಗೆ ಇಲಾಖೆಯೇ ಬಹಿರಂಗಪಡಿಸದ ‘ಕಪ್ಪ’ ಸಲ್ಲಿಕೆಯ ಅಂಶ ಯಡಿಯೂರಪ್ಪರಿಗೆ ಹೇಗೆ ತಿಳಿಯಿತು? ಇಂತಹ ಆರೋಪ ಮಾಡುವ ಮೂಲಕ ಅವರು ಆದಾಯ ತೆರಿಗೆ ಇಲಾಖೆಗೂ ಸವಾಲಾಗಿದ್ದಾರೆ. ಹಾಗಾಗಿ ಯಡಿಯೂರಪ್ಪ ವಿರುದ್ಧ ಆದಾಯ ತೆರಿಗೆ ಇಲಾಖೆಯು ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕು ಎಂದು ವಿಧಾನಪರಿಷತ್ ಸರಕಾರಿ ಮುಖ್ಯ ಸಚೇತಕ ಐವನ್ ಡಿಸೋಜ ಹೇಳಿದ್ದಾರೆ.

ಯಡಿಯೂರಪ್ಪ ‘ಹಿಟ್ ಆ್ಯಂಡ್ ರನ್’ ಮನಸ್ಥಿತಿಯವರು. ವಿರೋಧಪಕ್ಷದ ನಾಯಕರಾಗಿ ಜವಾಬ್ದಾರಿ ನಿರ್ವಹಿಸಲು ಅವರು ವಿಫಲರಾಗಿದ್ದಾರೆ. ಕೇವಲ ರಾಜಕೀಯ ಕಾರಣಕ್ಕಾಗಿ ಇಂತಹ ಆರೋಪ ಮಾಡಲಾಗಿದೆ. ಇದರ ಹಿಂದೆ ವ್ಯವಸ್ಥಿತ ಸಂಚಿದೆ. ರಾಜ್ಯದ ಮಂತ್ರಿಗಳು-ಪಕ್ಷದ ನಾಯಕರನ್ನು ಗುರಿಯಾಗಿಸಿಕೊಂಡು ಆದಾಯ ತೆರಿಗೆ ಇಲಾಖೆ ದಾಳಿ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅದನ್ನು ಚುನಾವಣಾ ಪ್ರಚಾರದಲ್ಲಿ ಬಳಸಿಕೊಳ್ಳುತ್ತಿದ್ದಾರೆ ಎಂದು ಐವನ್ ಟೀಕಿಸಿದರು.

ಯಡಿಯೂರಪ್ಪರ ಮೇಲೆ ಲೋಕಾಯುಕ್ತದಲ್ಲಿ ದಾಖಲಾದ 15 ಪ್ರಕರಣಗಳು ಇದೀಗ ಸುಪ್ರೀಂಕೋರ್ಟ್‌ನ ಮೆಟ್ಟಟೇರಿದೆ. ಹೀಗಿರುವಾಗ ಅವರು ಯಾವುದೇ ಪುರಾವೆಯಿಲ್ಲದೆ ಆರೋಪ ಮಾಡಿರುವುದು ಖಂಡನೀಯ ಎಂದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ನಾಗೇಂದ್ರ ಕುಮಾರ್, ಸತೀಶ್ ಪೆಂಗಲ್, ಟಿ.ಎಸ್.ಅಬ್ದುಲ್ಲ, ಪ್ರೇಮ್ ಬಲ್ಲಾಳ್‌ಬಾಗ್, ಹಬೀಬ್ ಕಣ್ಣೂರು, ಚೇತನ್ ಬೋಳೂರು, ನಝೀರ್ ಬಜಾಲ್, ವಸಂತ ಶೆಟ್ಟಿ, ಹನೀಫ್ ಬೆಂಗರೆ, ಮಹೇಶ್ ಕೋಡಿಕಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News