ಉಡುಪಿ: ಕೇಂದ್ರದ ಸ್ಟೇಟ್‌ಬ್ಯಾಂಕ್‌ಗಳ ವಿಲೀನ ಕ್ರಮಕ್ಕೆ ಬ್ಯಾಂಕ್ ನೌಕರರ ಒಕ್ಕೂಟದಿಂದ ಪ್ರತಿಭಟನೆ

Update: 2017-02-16 13:45 GMT

ಉಡುಪಿ, ಫೆ.16: ಸಹವರ್ತಿ ಬ್ಯಾಂಕುಗಳನ್ನು ಭಾರತೀಯ ಸ್ಟೇಟ್ ಬ್ಯಾಂಕ್‌ನೊಂದಿಗೆ ವಿಲೀನಗೊಳಿಸುವ ಕೇಂದ್ರ ಸರಕಾರದ ನಿರ್ಧಾರವನ್ನು ವಿರೋಧಿಸಿ ಉಡುಪಿ ಜಿಲ್ಲಾ ಬ್ಯಾಂಕ್ ನೌಕರರ ಒಕ್ಕೂಟದ ವತಿಯಿಂದ ಗುರುವಾರ ಸಂಜೆ ಬಸ್‌ನಿಲ್ದಾಣದ ಎದುರಿನ ಕ್ಲಾಕ್‌ಟವರ್ ಬಳಿ ಪ್ರತಿಭಟನೆ ಹಮ್ಮಿಕೊಂಡಿತ್ತು.

ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್ ಮತ್ತು ಜೈಪುರ, ಸ್ಟೇಟ್ ಬ್ಯಾಂಕ್ ಆಫ್ ತಿರುವಾಂಕೂರ್, ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್‌ಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ವಿಲೀನಗೊಳಿಸುವ ಮೂಲಕ ಬ್ಯಾಂಕುಗಳ ವಿಲೀನದ ಹೊಸ ಶಕೆಯನ್ನು ಆರಂಭಿಸಿರುವ ನರೇಂದ್ರ ಮೋದಿ ಸರಕಾರದ ಈ ಕ್ರಮ ಕಾರ್ಮಿಕ ವಿರೋಧಿ ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ ಖಂಡಿಸಿದೆ.

ಈ ವಿಲೀನಕ್ಕೆ ಹಸಿರು ನಿಶಾನೆ ತೋರುವ ಮೂಲಕ ಕ್ಷೇತ್ರೀಯ ಮಟ್ಟದಲ್ಲಿ ಸಾಕಷ್ಟು ಬಲವಾಗಿ ಬೇರೂರಿರುವ ಪ್ರಾದೇಶಿಕ ಬ್ಯಾಂಕುಗಳ ಅಸ್ತಿತ್ವವನ್ನು ಹಾಳುಗೆಡಹುವ ಹುನ್ನಾರದ ವಿರುದ್ಧ ಈಗಾಗಲೇ ನೌಕರರು ಹಾಗೂ ಸಾರ್ವಜನಿಕರು ತೋರಿರುವ ಬಲವಾದ ಪ್ರತಿರೋಧವನ್ನು ಲೆಕ್ಕಿಸದೇ ಕೇಂದ್ರ ಸರಕಾರ ಏಕಪಕ್ಷೀಯವಾಗಿ ಈ ನಿರ್ಧಾರವನ್ನು ಕೈಗೊಂಡಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.

ಈ ವಿಲೀನದಿಂದ ಹಲವು ಬ್ಯಾಂಕ್ ಶಾಖೆಗಳನ್ನು ಮುಚ್ಚುವ ಇಲ್ಲವೇ ಸ್ಥಳಾಂತರಿಸುವ ಸಾಧ್ಯತೆ ಇದ್ದು, ಇದರಿಂದ ಗ್ರಾಹಕರಿಗೂ, ಸಾರ್ವಜನಿಕರಿಗೂ ಹಾಗೂ ಸಿಬ್ಬಂದಿಗೆ ತೊಂದರೆ ಉಂಟಾಗಲಿದೆ. ಈ ಬಗ್ಗೆ ಈಗಾಗಲೇ ದೇಶಾದ್ಯಂತ ಬ್ಯಾಂಕ್ ನೌಕರರ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆದಿದೆ ಎಂದು ಅವರು ಹೇಳಿದರು.

 ಉಡುಪಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಉಡುಪಿ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಅದ್ಯಕ್ಷ ರಾಮಮೋಹನ್, ಪ್ರಧಾನ ಕಾರ್ಯದರ್ಶಿ ಹೆರಾಲ್ಡ್ ಡಿಸೋಜ ಮಾತನಾಡಿದರು.

ವಿವಿಧ ಬ್ಯಾಂಕುಗಳ ಪ್ರತಿನಿಧಿಗಳಾದ ರಘುರಾಮ ಕೃಷ್ಣ ಬಲ್ಲಾಳ್, ವರದರಾಜ, ನಾರಾಯಣ ಭಟ್, ನಿತ್ಯಾನಂದ, ಪ್ರದೀಪ್, ಗಣೇಶ್, ಜಯನ್ ಮಲ್ಪೆ, ಸುಂದರ ಗುಜ್ಜರಬೆಟ್ಟು, ಕಾರ್ಮಿಕ ಮುಖಂಡ ಅದಮಾರು ಶ್ರೀಪತಿ ಆಚಾರ್ಯ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News