ಕೆಐಎಡಿಬಿ ಯೋಜನೆ ಪ್ರದೇಶದ ರಸ್ತೆ ಅಭಿವೃದ್ಧಿಗೆ 10 ಕೋಟಿ ರೂ, ನೀರಾವರಿಗೆ 2 ಕೋಟಿ ರೂ ಮಂಜೂರು: ಮೊಯ್ದಿನ್ ಬಾವ
ಮಂಗಳೂರು,ಫೆ.16:ಸಣ್ಣ ನೀರಾವರಿ ಯೋಜನೆಯಡಿ ವಿವಿಧೆಡೆ ಕಾಮಗಾರಿಗಾಗಿ ಮಂಗಳೂರು ಉತ್ತರ ವಲಯದಲ್ಲಿ 2 ಕೋಟಿ ರೂ. ವಿಶೇಷ ಹೆಚ್ಚುವರಿ ಅನುದಾನ ದೊರಕಿದೆ. ಕೆ ಐಎಡಿಬಿ ಯೋಜನೆ ಪ್ರದೇಶದ ರಸ್ತೆ ಅಭಿವೃದ್ಧಿಗೆ 10 ಕೋಟಿ ರೂ ಮಂಜೂರಾಗಿದೆ ಎಂದು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಮೊಯ್ದಿನ್ ಬಾವಾ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಸುರತ್ಕಲ್ ವ್ಯಾಪ್ತಿಯಲ್ಲಿ ಹಾನಿಗೀಡಾದ ರಸ್ತೆಯನ್ನು ದುರಸ್ತಿ ಮತ್ತು ಕಾಂಕ್ರಿಟೀಕರಣ ಗೊಳಿಸಲಾಗುತ್ತಿದ್ದು, ಇದಕ್ಕೆ ಟೆಂಡರ್ ಪ್ರಕ್ರಿಯೆ ಆರಂಭಗೊಂಡಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ನವೇ ವಿಸ್ತರಣೆಗ 200 ಎಕರೆ ಜಾಗವನ್ನು ನೀಡಬೇಕೆಂಬ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಎಂಆರ್‌ಪಿಎಲ್ ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ಜಿಲ್ಲೆಯಲ್ಲಿ ಸ್ಥಾಪಿಸುವ ಉದ್ದೇಶ ಕ್ಕಾಗಿ ಮುಚ್ಚೂರು ಎಂಬಲ್ಲಿ ಇರುವ 10 ಎಕರೆ ಜಾಗವನ್ನು ಮಂಜೂರು ಮಾಡುವ ಬಗ್ಗೆ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ.
ಪಶ್ಚಿಮ ವಾಹಿನಿ ಯೋಜನೆಗೆ 1000ಕೋಟಿ ರೂ. ನೀಡಲು ಸರಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆ ಹೊರತುಪಡಿಸಿ ನಗರೋತ್ಥಾನ ಯೋಜನೆಯಡಿ ಮುಖ್ಯಮಂತ್ರಿಗಳ 4ನೇ ಹಂತದ 100 ಕೋಟಿ ರೂ. ಅನುದಾನವನ್ನು ಮಂಗಳೂರು ಮಹಾನಗರ ಪಾಲಿಕೆಗೆ ನೀಡಲು, ಹಜ್ ಭವನಕ್ಕೆ 5 ಕೋಟಿ ರೂ., ಅಲ್ಪಸಂಖ್ಯಾತರ ಅಕಾಡೆಮಿಗೆ ಸ್ಥಾಪನೆಗೆ 2 ಕೋಟಿ ರೂ. ನೀಡಲು ಬೇಡಿಕೆಯಿಟ್ಟಿದ್ದೇನೆ.ೆ ಶಾಸಕ ಮೊಯ್ದೀನ್ ಬಾವಾ ಹೇಳಿದರು.
ಎಂಆರ್‌ಪಿಎಲ್‌ಗೆ ಸಾಗುವ ರಸ್ತೆಯನ್ನು 2.75 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸುವ ಪ್ರಕ್ರಿಯೆಗೆ ಕೆಲವರು ಪ್ರತಿಭಟನೆ ನಡೆಸಿ ತಡೆಯುಂಟು ಮಾಡಿದ್ದರು. ಸ್ಥಳೀಯ ದೇವಸ್ಥಾನದ ದ್ವಾರವನ್ನು ಕೆಡವಿ ಕಾಮಗಾರಿ ನಡೆಸಲಾಗುತ್ತದೆ ಎಂಬ ತಪ್ಪು ಸಂದೇಶವನ್ನು ಪ್ರಚಾರ ಮಾಡಿದ್ದರು. ಈ ನಡುವೆಯೂ ಕಾಮಗಾರಿ ಮುಂದುವರಿಸಲಾಗಿದೆ. ಆದರೆ ಈಗ ಬಿಜೆಪಿ ಮುಖಂಡರು ತಮ್ಮ ಮಾತು ಬದಲಾಯಿಸಿದ್ದಾರೆ. ಈ ಕಾಮಗಾರಿಗೆ ಅನುದಾನ ಬರಲು ನಾವು ಕಾರಣ ಎನ್ನುತ್ತಿದ್ದಾರೆ.
ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯ 2ನೇ ಹಂತದ ಅನುದಾನದಲ್ಲಿ ಉಳಿಕೆ ಹಣದಲ್ಲಿ ಶೇ. 40ರಷ್ಟನ್ನು ಸುರತ್ಕಲ್‌ನಲ್ಲಿ ಈ ಅಭಿವೃದ್ಧಿ ಕಾರ್ಯಕ್ಕೆ ಬಳಸಲಾಗುತ್ತಿದೆ. ಅವರಿಗೆ ಅಭಿವೃದ್ಧಿ ನಡೆಸಲು ಅವಕಾಶವಿದ್ದ ಸಂದರ್ಭದಲ್ಲಿ ಈ ಅಭಿವೃದ್ಧಿ ಕಾರ್ಯವನ್ನು ಮಾಡದೆ ನೆನಗುದಿಗೆ ಬಿದ್ದಿತ್ತು.ನಮ್ಮ ಅಧಿಕಾರಾವಧಿಯಲ್ಲಿ ಈ ಕೆಲಸವನ್ನು ನಾವು ಕೈಗೆತ್ತಿಕೊಂಡು ಮಾಡುತ್ತಿದ್ದೇವೆ.ಸರಕಾರದಿಂದ ದೊರೆತ ಅನುದಾನವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡುತ್ತಿದ್ದೇವೆ ಎಂದು ಮೊಯ್ದಿನ್ ಬಾವ ತಿಳಿಸಿದರು.
ಸುರತ್ಕಲ್ ವ್ಯಾಪ್ತಿಯಲ್ಲಿ ರೈಲ್ವೇ ಬಿಡ್ಜ್ ನಿರ್ಮಾಣ ಯೋಜನೆಯ ಗುರಿ ಹೊದಲಾಗಿದೆ.ಈ ಬಗ್ಗೆ ಅಂದಾಜು ಪಟ್ಟಿ ಸಿದ್ಧಪಡಿಸಲು ಪಾಲಿಕೆಯಿಂದ ಕೊಂಕಣ ರೈಲ್ವೇಗೆ ಹಣ ನೀಡಲಾಗಿದೆ. 2 ಕೋಟಿ ರೂ. ವೆಚ್ಚದಲ್ಲಿ ಬ್ರಿಡ್ಜ್ ನಿರ್ಮಾಣ ಮಾಡಲಾಗುವುದು. ಸ್ಮಶಾನ ಸುಸಜ್ಜಿತಗೊಲಿಸಲು 35 ಲಕ್ಷ ರೂ ನಿಗದಿಪಡಿಸಲಾಗಿದೆ. ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡುವ ಯೋಜನೆಯಿದೆ.ಹಳೇ ಮಾರುಕಟ್ಟೆ ಪ್ರದೇಶದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣ ಹಾಗೂ ಇತರ ಕೆಲಸಗಳನ್ನು ನಡೆಸಲಾಗುವುದು. ಸುರತ್ಕಲ್- ಕೈಕಂಬ ರಸ್ತೆ ಅಭಿವೃದ್ಧಿಯನ್ನು 48 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡುವ ಯೋಜನೆಹೊಂದಲಾಗಿದೆ.ಕಾಟಿಪಳ್ಳ,ಸುರತ್ಕಲ್,ಕಾವೂರು ಪ್ರದೇಶದಲ್ಲಿ 3ಕೋಟಿ ವೆಚ್ಚದಲ್ಲಿ ಮಾರುಕಟ್ಟೆ ಅಭಿವೃದ್ಧಿ ಯೋಜನೆ ಚಾಲನೆಯಲ್ಲಿದೆ ಎಂದು ಮೊಯ್ದಿನ್‌ಬಾವ ತಿಳಿಸಿದರು.
ಸುದ್ದಿಗೊಷ್ಠಿಯಲ್ಲಿ ಪಕ್ಷದ ವಿವಿಧ ಘಟಕಗಳ ಪ್ರತಿನಿಧಿಗಳಾದ ಶೇಖರ ಪೂಜಾರಿ,ಗಣೇಶ್ ಪೂಜಾರಿ, ಹೇಮಂತ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.